

ಶಿವಮೊಗ್ಗ: ನಗರದ ಮಹಿಳೆಗೆ ಬರೋಬ್ಬರಿ ಲಕ್ಷ ಲಕ್ಷ ಬಹುಮಾನದ ಆಸೆ ತೋರಿಸಿ 3.71 ಲಕ್ಷ ರೂ. ವಂಚಿಸಲಾಗಿದೆ.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ಮಹಿಳೆ ವಂಚನೆಗೆ ಒಳಗಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್ ಡಿಪಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಲೋಗೋ ಹಾಕಿಕೊಂಡು ತಾನು ಬ್ಯಾಂಕ್ ವ್ಯವಸ್ಥಾಪಕ ಎಂದು ಮಹಿಳೆಗೆ ಪರಿಚಯಿಸಿಕೊಂಡಿದ್ದ.
ಮಹಿಳೆಯ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿ ನೀವು 30 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿದ್ದ. ಆ ಸಂದೇಶದಿಂದ ಮಹಿಳೆ ಸಂತಸಗೊಂಡಿದ್ದಳು. ತದನಂತರ ಬಹುಮಾನದ ಹಣ ವರ್ಗಾಯಿಸಲು ಖಾತೆ ಸಂಖ್ಯೆ ನೀಡಿ ಎಂದು ಮಹಿಳೆಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದ. ನಂತರ ಲಾಟರಿ ಹಣ ವರ್ಗಾವಣೆ ಮಾಡಬೇಕಾದರೆ ಸರ್ವಿಸ್ ಶುಲ್ಕ, ತೆರಿಗೆ ಮತ್ತು ಇತರೆ ಕಾರಣಗಳ ನೆಪ ಹೇಳಿ ಹಂತ ಹಂತವಾಗಿ ಒಟ್ಟು 3,71,400 ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.