

ಜಗಳೂರು: ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಹೊಲಗದ್ದೆಗಳಲ್ಲಿ ಕುರಿಗಳನ್ನು ಮೇಯಿಸುವ ಕುರಿಗಾಹಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನಲ್ಲಿ 58,838 ಹೆಕ್ಟೇರ್ ವ್ಯಾಪ್ತಿಯುಳ್ಳ ಗುಹೇಶ್ವರ ಗುಡ್ಡ ಅರಣ್ಯ ಪ್ರದೇಶದಲ್ಲಿ ಚಿರತೆ, ಕಿರುಬ, ತೋಳಗಳಿಂದ ರಕ್ಷಿಸಿಕೊಳ್ಳಲು ರಾತ್ರಿಯಿಡೀ ನಿದ್ದೆಗೆಟ್ಟು ಕಾಯಬೇಕಾಗಿದೆ.
ತಾಲೂಕಿನ ತೋರಣಗಟ್ಟೆ, ಜಮ್ಮಾಪುರ, ಗೌರಮ್ಮನಹಳ್ಳಿ, ರಂಗಯ್ಯನ ದುರ್ಗ ವ್ಯಾಪ್ತಿಯ ಕೆಳಗೋಟೆ, ಗುಡ್ಡದನಿಂಗನಹಳ್ಳಿ ಮತ್ತಿತರ ಹಳ್ಳಿಗಳಲ್ಲಿ ಹೆಚ್ಚಿನ ಕುರಿಗಳಿದ್ದು, ಕಾಡಂಚಿನಲ್ಲಿ ಮೇಯಿಸುವುದು ದೊಡ್ಡ ತಲೆನೋವಾಗಿದೆ. ಕಾಡಂಚಿನ ಬಹುತೇಕ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ನಿಂತಿದ್ದು, ಹೊಲಗಳಲ್ಲಿ ಗೊಬ್ಬರಕ್ಕಾಗಿ ಕುರಿ ಮಂದೆ ಬಿಡಾರ ಹಾಕುವುದು ಸವಾಲಾಗಿ ಪರಿಣಮಿಸಿದೆ.
ಜಾಲಿ ಗಿಡಗಳ ಪೊದೆಯಲ್ಲಿ ಅವಿತಿರುವ ಕಿರುಬಗಳು ಸಂಜೆಯಾದರೆ ರೊಪ್ಪದ ಬಳಿ ಬಂದು ಕುರಿ, ಮೇಕೆಗಳ ಬೇಟೆಗೆ ಸಜ್ಜಾಗುತ್ತವೆ. ತೋರಣಗಟ್ಟೆ, ಕಟ್ಟಿಗೆಹಳ್ಳಿ ಗ್ರಾಮಗಳ ನಡುವಿನ ಹಳ್ಳದ ಸಮೀಪ ಜಾಲಿ ದಟ್ಟವಾಗಿ ಬೆಳೆದಿದ್ದು, ರಾತ್ರಿ ಜೀವ ಭಯದಲ್ಲಿ ಬದುಕುತ್ತಿದ್ದೇವೆ ಎಂದು ತೋರಣಗಟ್ಟೆ ಗ್ರಾಮದ ಕುರಿಗಾಹಿ ನಾಗೇಂದ್ರಪ್ಪ ಅಳಲು ತೋಡಿಕೊಂಡರು.
ಕಳೆದ ಭಾನುವಾರ ರಾತ್ರಿ ಕಿರುಬ ಕುರಿ ಬಿಡಾರಕ್ಕೆ ನುಗ್ಗಿತ್ತು. ಕುರಿಗಳ ಜತೆಗೆ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇತ್ತೀಚೆಗಷ್ಟೇ ಜಮ್ಮಾಪುರ ಗ್ರಾಮದಲ್ಲಿ ಕುರಿಗಾಹಿ ಹುಡುಗನ ಮೇಲೆ ಕಿರುಬ ದಾಳಿ ನಡೆಸಿತ್ತು. ಆದ್ದರಿಂದ ಅರಣ್ಯಾಧಿಕಾರಿಗಳು ಬೋನು ಇರಿಸಿ ಕಿರುಬ ಮತ್ತು ಚಿರತೆ ಸೆರೆಹಿಡಿದು ಬೇರೆ ಕಡೆ ಬಿಡುವಂತೆ ಒತ್ತಾಯಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳು ಇರುವುದು ಸಹಜ. ಈ ಭಾಗದಲ್ಲಿ ಚಿರತೆ, ಕಿರುಬ ಇರುವ ಬಗ್ಗೆ ಮಾಹಿತಿ ಇದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.ಜಿ.ಆರ್. ಶಶಿಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ.