ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ

MAHESH TENGINAKAYI
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ.39, 41 ಮತ್ತು 46 ರಲ್ಲಿ 43 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಸಿಸಿ ರಸ್ತೆ, ಒಳಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ನಡೆಯಿತು.

ಅಶೋಕ ನಗರ, ವಿಜಯ ನಗರ, ಸಬ್​ಜೈಲ್ ರಸ್ತೆ, ಅಧ್ಯಾಪಕ ನಗರ, ಮಯೂರಿ ಬಡಾವಣೆ, ಗೋಪನಕೊಪ್ಪ ಮುಖ್ಯರಸ್ತೆ, ಸಾಯಿಲೇಔಟ್, ರಾಜನಗರ, ಪತ್ರಕರ್ತರ ನಗರ ಬಡಾವಣೆಗಳಲ್ಲಿ ನಿಧಾನಗತಿಯ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಸೀಮಾ ಮೊಗಲಿಶೆಟ್ಟರ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಪ್ಯಾಕೆಜ್ ಅವಧಿ ಮುಗಿಯುತ್ತ ಬಂದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ವೀರಣ್ಣ ಸವಡಿ ದೂರಿದರು.

ನಿಧಾನಗತಿಯ ಕಾಮಗಾರಿ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಹೇಶ ಟೆಂಗಿನಕಾಯಿ, ಸಿಸಿ ರಸ್ತೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಕಪು್ಪ ಪಟ್ಟಿಗೆ ಸೇರಿಸಲಾಗುವುದು ಎಂದು ಗುತ್ತಿಗೆದಾರ ಹಿರೇಮಠ ಅವರಿಗೆ ಎಚ್ಚರಿಕೆ ನೀಡಿದರು.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಇಚ್ಛಾಶಕ್ತಿ ತೋರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಶಾಸಕ ಟೆಂಗಿನಕಾಯಿ ಸೂಚಿಸಿದರು.

ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಯಾವುದೇ ರೀತಿಯ ಕಾರಣಗಳನ್ನು ಹೇಳಬಾರದು ಎಂದು ನಿರ್ದೇಶನ ನೀಡಿದರು.

ಆ. 15ರಂದು ಮತ್ತೊಮ್ಮೆ ಸಭೆ ಕರೆದು, ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಮಹಾಪೌರರಾದ ವೀಣಾ ಬರದ್ವಾಡ, ಕಾಮಗಾರಿಗಳ ನೋಡಲ್ ಅಧಿಕಾರಿ ವಿಠ್ಠಲ ತುಬಾಕಿ, ಸಿದ್ದು ಮೊಗಲಿಶೆಟ್ಟರ, ಪಾಲಿಕೆ, ಲೋಕೋಪಯೋಗಿ ಇಲಾಖೆ, ಎಲ್ ಆಂಡ್ ಟಿ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net