ರೈತರಿಗೆ ಸಿಹಿ, ಕಹಿ ತಂದ ಮೆಕ್ಕೆಜೋಳ ಬೆಳೆ

myk
Published on

ಮಾಯಕೊಂಡ: ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ದಾವಣಗೆರೆ, ಅದರಲ್ಲೂ ಮುಖ್ಯವಾಗಿ ದಾವಣಗೆರೆ ತಾಲೂಕು ಮೆಕ್ಕೆಜೋಳ ಕಣಜ ಎಂದೇ ಗುರುತಿಸಲ್ಪಟ್ಟಿದೆ. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಲ್ಲಿ ಮೆಕ್ಕೆಜೋಳ ಬಂಪರ್ ಬೆಳೆ ಇದ್ದು, ರೈತರು ಉತ್ತಮ ಮಾರುಕಟ್ಟೆ ಧಾರಣೆ ನಿರೀಕ್ಷೆಯಲ್ಲಿದ್ದಾರೆ.

ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಮತ್ತು ದಾವಣಗೆರೆ ಕಸಬಾ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಉತ್ತಮ ಹದಮಳೆ ಸುರಿದಿದ್ದರಿಂದ ಮೆಕ್ಕೆಜೋಳದ ಬೆಳೆ ಉತ್ತಮವಾಗಿದೆ.
ತಡವಾಗಿ ಬಿತ್ತನೆ ಮಾಡಿದವರಿಗೆ ಕಹಿ: ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ, ಎಚ್. ಬಸವಾಪುರ, ಕ್ಯಾತನಹಳ್ಳಿ, ಇಂಡಿಸಕಟ್ಟೆ, ಹೆದ್ನೇ, ಎಚ್. ರಾಂಪುರ, ನಲ್ಕುಂದ, ಅಣಬೇರು, ಮಾಯಕೊಂಡ ಗ್ರಾಮಗಳಲ್ಲಿ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಜುಲೈ ತಿಂಗಳ ಕೊನೆಯ ವಾರದಲ್ಲಿ ಬಿತ್ತಲಾಯಿತು. ಆದರೆ, ತದನಂತರ ನಿರಂತರವಾಗಿ ಮಳೆ ಸುರಿದಿದ್ದರಿಂದ ಬೆಳೆಗೆ ಶೀತ ಆವರಿಸಿ ನೆಲಬಿಟ್ಟು ಮೇಲೇಳಲಿಲ್ಲ.
ಆದರೆ, ಆನಗೋಡು, ಅಣಜಿ, ಮಾಯಕೊಂಡ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಬೆಳೆದು ನಿಂತಿದ್ದು, ಕಾಳು ಕಟ್ಟಿವೆ.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಡಿ.ಎಂ. ಶ್ರೀಧರ್ ಮೂರ್ತಿ, ಈ ಬಾರಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಉತ್ತಮ ಧಾರಣೆ ಸಿಗುವ ನಿರೀಕ್ಷೆಯಿದ್ದು, ಪ್ರಸ್ತುತ 3200ರ ಗಡಿ ದಾಟಿದೆ. ಬೆಳೆ ಕಟಾವಿನ ನಂತರ ದಾವಣಗೆರೆ ಮಾರುಕಟ್ಟೆಯಲ್ಲಿ 3500 ರೂ.ಗಿಂತ ಹೆಚ್ಚಿನ ದರ ಸಿಗಬಹುದೆಂಬ ನಿರೀಕ್ಷೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net