

ಮಂಡ್ಯ: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ‘ಟಿಪ್ಪು ಎಕ್ಸ್‌ಪ್ರೆಸ್’ ರೈಲಿನ ಹೆಸರು ಬದಲಾಯಿಸಿ ‘ಒಡೆಯರ್ ಎಕ್ಸ್‌ಪ್ರೆಸ್’ ಎಂದು ಮರು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಭಾನುವಾರ ರೈಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೈಸೂರು ಕಡೆಯಿಂದ ಬಂದ ಒಡೆಯರ್ ಎಕ್ಸ್‌ಪ್ರೆಸ್ ರೈಲನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಜತೆಗೆ ರೈಲಿಗೆ ಬಾಳೆ ಕಂದು, ಬಲೂನ್ ಕಟ್ಪಿ, ಬೂದಗುಂಬಳ ಹೊಡೆದು ಪೂಜೆ ಸಲ್ಲಿಸಿ ಹಾಗೂ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಅಂತೆಯೇ ಕೇಂದ್ರ ಸರ್ಕಾರಕ್ಕೆ ಜೈಕಾರ ಕೂಗುವುದರ ಜತೆಗೆ ವಿಡಿಯೋ ಕಾಲ್ ಮೂಲಕ ಸಂಸದ ಪ್ರತಾಪ್ ಸಿಂಹಗೆ ಧನ್ಯವಾದ ತಿಳಿಸಲಾಯಿತು.
ಸಿ.ಪಿ.ಉಮೇಶ್ ಮಾತನಾಡಿ, ಮೈಸೂರಿನ ರಾಜವಂಶಸ್ಥರು ನಾಡಿಗೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ವಾಡಬೇಕು. ಅಂತೆಯೇ ಒಕ್ಕಲಿಗ ಸಮುದಾಯ ಕುವೆಂಪು ವಿಶ್ವವಾನವ ಸಂದೇಶವನ್ನು ಸಾರಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಕುವೆಂಪು ಅವರ ಹೆಸರಿಡಬೇಕೆಂಬುದು ಹಲವು ವಷರ್ದ ಮನವಿಯಾಗಿತ್ತು ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಚೆನ್ನೈ-ಮೈಸೂರು ಸಂಚರಿಸುವ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಜನ ಇದನ್ನು ವಿರೋಧಿಸಿದ್ದರು. ಆದರೂ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಹೆಸರು ಬದಲಾವಣೆ ಮಾಡಲಿಲ್ಲ. ಈ ಬಗ್ಗೆ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪಸಿಂಹ ಅವರು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಪತ್ರ ಬರೆದು ಒಡೆಯರ್ ಅವರ ಹೆಸರನ್ನಿಡುವಂತೆ ಒತ್ತಾಯಿಸಿದ್ದರು. ಅವರ ಹೋರಾಟದ ಫಲವಾಗಿ ಕೇಂದ್ರ ರೈಲ್ವೆ ಸಚಿವಾಲಯ ಒಡೆಯರ್ ಹೆಸರನ್ನಿಟ್ಟಿರುವುದು ಸ್ವಾಗತಾರ್ಹ ಎಂದರು.
ಇದಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುತ್ತಿದ್ದ ತಾಳಗುಪ್ಪ ರೈಲಿಗೆ ‘ಕುವೆಂಪು ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ. ಇದರೊಂದಿಗೆ ಒಕ್ಕಲಿಗ ಸಮುದಾಯದ ಜನರಿಗೂ ಗೌರವ ತಂದುಕೊಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ ಅವರಿಗೆ ಅಭಿಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಮುಖಂಡರಾದ ಎಚ್.ಆರ್.ಅರವಿಂದ್, ವಿವೇಕ್, ಡಾ.ಸದಾನಂದ, ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ್, ನಾಗಾನಂದ, ವಸಂತ, ಮಹೇಶ್, ಹರ್ಷ, ಮನು, ಮಹಂತಪ್ಪ, ನವೀನ್, ಶಿವಕುಮಾರ್ ಇತರರಿದ್ದರು.