

ಹೊನ್ನಾಳಿ: ಬರೀ ಪುರುಷರೇ ಸೇರಿ ಶಿವನನ್ನು ಆರಾಧಿಸುವ ಮಹೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಪ್ರಾರಂಭವಾಯಿತು. ಜಾತ್ರೆ ನಿಮಿತ್ತ ತಾಲೂಕಿನ ಮಾಸಡಿ ಗ್ರಾಮದಲ್ಲಿ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಂತರ ಗ್ರಾಮದ ಹೊರ ವಲಯದ ಸ್ವಾಮಿಯ ತೋಟದಲ್ಲಿ ಮಹೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಶ್ರೀಗಳಿಂದ ಪೂಜಾ ಕೈಂಕರ್ಯಗಳು ನಡೆದವು.
ನಂತರ ಆಶೀರ್ವಚನ ನೀಡಿದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು, ಶಿವನನ್ನು ಯಾವುದೇ ರೀತಿಯಲ್ಲಿ ಪೂಜಿಸಿದರೂ ಆತ ಭಕ್ತರಿಗೆ ಒಲಿಯುತ್ತಾನೆ. ಭಕ್ತರು ಒಂದು ತುಂಬೆ ಹೂವು ಅರ್ಪಿಸಿ ಪೂಜಿಸಿ ಬೇಡಿದರೆ ಶಿವ ಏನನ್ನಾದರೂ ಕೊಡುತ್ತಾನೆ. ಆದರೆ ಭಕ್ತಿ ಮುಖ್ಯ ಅಷ್ಟೆ ಎಂದರು.
ಪುಷ್ಯ ಮಾಸದ ಎಳ್ಳಮಾವಾಸ್ಯೆ ಸಮೀಪ ಇರುವಾಗ ಗ್ರಾಮದಲ್ಲಿ ಮಹೇಶ್ವರ ಸ್ವಾಮಿಯನ್ನು ಆರಾಧಿಸುವ ಪ್ರತೀತಿ ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಬಾಳೆಹಣ್ಣು ಪ್ರಸಾದ : ಮಹೇಶ್ವರ ಜಾತ್ರೆಗೆ ಬರುವ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದ ವಿತರಿಸಲಾಗುತ್ತದೆ. ಅನ್ನ, ಸಕ್ಕರೆ ಅಥವಾ ಬೆಲ್ಲ, ಹಾಲು ಹಾಗೂ ಬಾಳೆಹಣ್ಣು ಸೇರಿಸಿ ತಯಾರಿಸುವ ಬಾಳೆಹಣ್ಣು ಬಾನ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಯಿತು.
ಮಹೇಶ್ವರ ಜಾತ್ರೆಯ ಬಗ್ಗೆ ಅನೇಕ ಪುರಾಣಗಳು ಪ್ರತೀತಿಯಲ್ಲಿವೆ. ಶಿವನು ಮಹೇಶ್ವರ ರೂಪದಲ್ಲಿ ಅವತರಿಸಿ ಹೋದ ಕಡೆಗಳಲ್ಲಿ ಭಕ್ತರನ್ನು ಸನ್ಮಾರ್ಗಕ್ಕೆ ತರುತ್ತಿದ್ದ ಹಾಗೂ ಗುರು ಲಿಂಗ ಜಂಗಮರನ್ನು ಗೌರವಿಸುತ್ತಿದ್ದರಿದ ತಾನೇ ಮಹೇಶ್ವರ ಎಂದು ಪ್ರಸಿದ್ದನಾಗಿದ್ದ, ಮಹೇಶ್ವರ ಗ್ರಾಮದಿಂದ ಗ್ರಾಮಕ್ಕೆ ತೆರಳುತ್ತಿದ್ದಾಗ ಊರ ಒಳಗೆ ಪ್ರವೇಶ ಮಾಡದೆ ಊರಾಚೆಯ ತಂಗುತ್ತಿದ್ದರು. ಹಾಗೂ ಹಾಲು, ಹಣ್ಣು ಮಾತ್ರ ಸೇವಿಸುತ್ತಿದ್ದರು. ತಾನು ಸಂಚಾರ ಮಾಡುತ್ತಿದ್ದ ಸ್ಥಳದಲ್ಲಿ ಮಹೇಶ್ವರನನ್ನು ಪೂಜಿಸುವಂತೆ ತನ್ನ ಭಕ್ತರಿಗೆ ತಿಳಿಸಿದ್ದರಿಂದ ಈಗಲೂ ಊರಾಚೆ ಪ್ರತಿವರ್ಷ ಪುಷ್ಯಮಾಸದಲ್ಲಿ ಮಹೇಶ್ವರ ಜಾತ್ರೆಯನ್ನು ಆಚರಣೆ ಮಾಡುತ್ತಾರೆ.
ಅಲ್ಲಿ ಪ್ರತಿಷ್ಠಾಪಿಸಿದ್ದ ದೇವರು ಊರೊಳಗೆ ಬಂದಾಗ ಇಡೀ ಗ್ರಾಮದಲ್ಲಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತೇವೆ ಎನ್ನುತ್ತಾರೆ ಗ್ರಾಮದ ಹಿರಿಯರು.