

ಮೈಸೂರು: ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಬಾರದೇ ಹೋಗಿದ್ದರೆ ಇಡೀ ಸಾಹಿತ್ಯ ಕ್ಷೇತ್ರವೇ ಕಳಾಹೀನವಾಗಿ ಹೋಗುತ್ತಿತ್ತು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಂಸ್ಕೃತ ವಿಭಾಗದಿಂದ ಸರಸ್ವತಿಪುರಂನ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಸಂಸ್ಕೃತ-ಕನ್ನಡ ಅನುವಾದ ಪರಂಪರೆ’ ವಿಷಯವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತ ಸಾಹಿತ್ಯದಿಂದ ಕನ್ನಡದ ಕಾವ್ಯ ಚಿಂತನಾ ಪರಂಪರೆಗೆ ಹೊಸ ರೂಪ ದೊರೆಯಿತು. ಸಂಸ್ಕೃತದಿಂದ ಕನ್ನಡಕ್ಕೆ ಅಗಾಧ ಪ್ರಮಾಣದ ಕೃತಿಗಳು ಅನುವಾದಗೊಂಡಿವೆ. ಆದರೆ ಕನ್ನಡದಿಂದ ಸಂಸ್ಕೃತಕ್ಕೆ ಅದರ ಶೇ.20 ಕೃತಿಗಳು ಅನುವಾದಗೊಂಡಿಲ್ಲ, ಅನುವಾದ ಕಾರ್ಯ ಹೆಚ್ಚಾಗಿ ನಡೆಯಬೇಕು ಎಂದರು.
ಸಂಸ್ಕೃತವೆಂಬುದು ಕನ್ನಡ ಸಾಹಿತ್ಯದಲ್ಲಿ ಬಾರದೇ ಹೋಗಿದ್ದರೆ ಇಡೀ ಸಾಹಿತ್ಯ ಕ್ಷೇತ್ರವೇ ಕಳಾಹೀನವಾಗಿ ಹೋಗುತ್ತಿತ್ತು. ಕನ್ನಡದ ಮೀಮಾಂಸಾ ಕ್ಷೇತ್ರ ಶ್ರೀಮಂತವಾಗಿದ್ದೇ ಸಂಸ್ಕೃತದಿಂದ ಎಂದು ವಿಶ್ಲೇಷಿಸಿದರು.
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಸಂಸ್ಕೃತಕ್ಕೆ ಅನುವಾದಗೊಂಡಂತೆ ಪು.ತಿ.ನ. ಅವರ ಶ್ರೀಹರಿಚರಿತೆ ಕೃತಿಯೂ ಅನುವಾದಗೊಳ್ಳಬೇಕು. ಬೆನ್ನ ಹಿಂದಿನ ಅಪಾರವಾದ ರಾಶಿ ಸಂಪತ್ತು ನಮ್ಮ ಭಾರತೀಯ ಪರಂಪರೆಯ ಸಂಸ್ಕೃತ ಎಂದು ಬಣ್ಣಿಸಿದರು.
ಕುವೆಂಪು ಭಾಷಾ ಭಾರತಿ ಮತ್ತು ಅನುವಾದ ಅಕಾಡೆಮಿ ಮಾಜಿ ಅಧ್ಯಕ್ಷ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪ್ರಧಾನ ಗುರುದತ್ತ ಮಾತನಾಡಿ, ಸಂಸ್ಕೃತ ವಿಶಾಲ ಮಹಾ ಸಾಗರದಂತೆ. ಅಗೆದಷ್ಟೂ ಹೊಸತು ಲಭಿಸುತ್ತದೆ. ಭಾಷಾ ಸಾಹಿತ್ಯಕ್ಕೆ ಪ್ರೇರಕವಾಗಿರುವಂತಹದ್ದು ಸಂಸ್ಕೃತ ಎಂದು ಹೇಳಿದರು.
ಸಂಸ್ಕೃತದ ಹಿನ್ನೆಲೆಯಿಲ್ಲದೆ ಯಾವುದೇ ಭಾಷೆ ಬೆಳೆಯಲು ಸಾಧ್ಯವೇ ಇಲ್ಲ. ದಕ್ಷಿಣ ಭಾರತದ ಭಾಷೆಗಳನ್ನು ದ್ರಾವಿಡ ಭಾಷೆಗಳೆನ್ನುತ್ತಾರೆ. ಈ ದ್ರಾವಿಡ ಭಾಷೆಗಳಿಗೆ ಮೂಲ ಪ್ರೇರಣೆಯೇ ಸಂಸ್ಕೃತ ಸಾಹಿತ್ಯ ಎಂದರು.
ನಾವು 21ನೇ ಶತಮಾನಕ್ಕೆ ಕಾಲಿಟ್ಟರೂ ಮಹಾಕಾವ್ಯದ ಪರಂಪರೆ ನಿಂತಿಲ್ಲ. ವ್ಯಾಸರ ಮಹಾಭಾರತದ ಮುಂದೆ ಯಾವ ಭಾರತವೂ ಇಲ್ಲ. ತಾಂತ್ರಿಕ ಜಗತ್ತಿನಲ್ಲೂ ಸಂಸ್ಕೃತವು ಅದಮ್ಯವಾಗಿ ಬೇರೂರಿದೆ. ನಮ್ಮ ವಿಶಾಲ ಪರಂಪರೆಗೆ ಶತಶತಮಾನಗಳಿಂದಲೂ ಕೃತಿ ಪ್ರಭಾವ ಬೀರಿವೆ. ಅದೇ ರೀತಿ ಜೀವನದ ಅನೇಕ ಸಮಸ್ಯೆಗಳಿಗೆ ಸಂಸ್ಕೃತದಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಕುದೇರು ಮಠದ ಡಾ.ಶ್ರೀಶರತ್ಚಂದ್ರಸ್ವಾಮೀಜಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಪೂರ್ಣಿಮಾ, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಬೆಂಗಳೂರಿನ ಬಸವೇಶ್ವರ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಸಿ. ಶಿವಕುಮಾರಸ್ವಾಮಿ, ಶೈಕ್ಷಣಿಕ ಡೀನ್ ಡಾ. ರೇಚಣ್ಣ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಷಡಕ್ಷರಿ, ಕನ್ನಡ ವಿಭಾಗದ ಪ್ರಾಧ್ಯಾಪಕ ಆರ್.ಎಸ್.ಕುಮಾರ್, ಟಿ.ಎನ್.ಪ್ರಭಾಕರ್ ಇದ್ದರು.