ಹಣ ನೀಡದೆ ಭತ್ತದ ವ್ಯಾಪಾರಿ ಪರಾರಿ

Kampli A pile of paddy left to dry in APMC premises
ಕಂಪ್ಲಿಯ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ ಭತ್ತದ ರಾಶಿ.
Published on

ಸಿಂಧನೂರು: ಭತ್ತ ಖರೀದಿಸಿದ ವ್ಯಾಪಾರಿ ಹಣ ನೀಡದೆ ಪರಾರಿಯಾಗಿದ್ದಾನೆಂದು ತಾಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರು ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಕಾರಟಗಿ ಪಟ್ಟಣದ ಮಹಾಮಲ್ಲೇಶ್ವರ ಟ್ರೇಡಿಂಗ್ ಹೆಸರಿನಲ್ಲಿ ಕಮಿಷನ್ ಏಜೆಂಟ್ ಆಗಿ ವ್ಯವಹಾರ ಮಾಡುತ್ತಿದ್ದ ಮಲ್ಲೇಶ ಎನ್ನುವ ವ್ಯಾಪಾರಿ ಉಪ್ಪಳ ಗ್ರಾಮದ ಸೂರ್ಯಬಾಬು ಅವರಿಂದ 460 ಚೀಲ, ಕೆ.ಎಂ.ಬಸವರಾಜ 170 ಚೀಲ, ಬಸವರಾಜ ಸಂಗಟಿ 200, ರಾಮರಾವ್ 1800, ಜಿ.ಗೋವಿಂದ 250 ಚೀಲ ಸೇರಿ ಸುಮಾರು 30 ರೈತರಿಂದ ಡಿಸೆಂಬರ್ ಮೊದಲ ವಾರದಲ್ಲಿ ಭತ್ತ ಖರೀದಿಸಿದ್ದಾನೆ.

75 ಕೆಜಿ ಭತ್ತಕ್ಕೆ 1800 ರೂ., ಪ್ರತಿ ಕ್ವಿಂಟಾಲ್‌ಗೆ 2400 ಬೆಲೆ ನಿಗದಿಪಡಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ತಿಳಿಸಿದ್ದು, ಎರಡ್ಮೂರು ವಾರ ಕಳೆದರೂ ವ್ಯಾಪಾರಿ ಹಣ ನೀಡಿಲ್ಲ. ಕೈಗೆ ಸಿಗುತ್ತಿಲ್ಲವೆಂದು ರೈತರಾದ ರಾಮರಾವ್, ಸೂರ್ಯಬಾಬು, ಮುದಿಯಪ್ಪ ಹರಿಜನ ಸೇರಿ ಇತರ ರೈತರು ಪಿಎಸ್‌ಐ ಮಹ್ಮದ್ ಇಸಾಕ್‌ಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಪಿಎಸ್‌ಐ ಮಹ್ಮದ್ ಇಸಾಕ್ ಪ್ರತಿಕ್ರಿಯಿಸಿ, ರೈತರು ದೂರು ಕೊಟ್ಟಿದ್ದು, ಅಗತ್ಯ ದಾಖಲೆ ನೀಡಲು ತಿಳಿಸಿರುವೆ. ಸದ್ಯದೂರು ನೀಡಿದ್ದು, ಪ್ರಕರಣ ದಾಖಲಿಸಿಲ್ಲ. ದಾಖಲೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ವ್ಯಾಪಾರಿ ವಿರುದ್ಧ ಕಾನೂನು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net