

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯಾವುದೇ ಸಾಧನೆ ಮಾಡಬೇಕಾದರೆ ಪರಿಶ್ರಮ ಪಡಬೇಕಾಗುತ್ತದೆ. ಪರಿಶ್ರಮ ಪಡದೆ ಗುರಿ ಸಾಧನೆ ಅಸಾಧ್ಯ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
ಹುಬ್ಬಳ್ಳಿ ಎಸ್ಜೆಎಂವಿ ಸಂಘದ ಶ್ರೀಮತಿ ಸುಧಾ ಆರ್. ಶೆಟ್ಟಿ ಬಾಲಕಿಯರ ಪ್ರೌಢಶಾಲೆಯ 2024-25ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿತ ಶಾಲೆ, ಗುರುಗಳು ಹಾಗೂ ತಂದೆ ತಾಯಿಗಳನ್ನು ಗೌರವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಗುರಿ ಇರಬೇಕು ಎಂದರು.
ಹೊಸೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಜಿ. ಸಿ. ಕೊಲಕಾರ ಮಾತನಾಡಿ, ಹೆಣ್ಣು ಮಕ್ಕಳು ತಮಗಿಷ್ಟವಾದ ಶಿಕ್ಷಣ ಪಡೆಯುವುದು ಮುಖ್ಯ. ಯಾವ ಆಮಿಷಕ್ಕೂ ಹಾಗೂ ಆಕರ್ಷಣೆಗೂ ಒಳಗಾಗದೆ ಶಿಕ್ಷಕರ ಮಾರ್ಗದರ್ಶದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಮುಖ್ಯಾಧ್ಯಾಪಕಿ ಆರ್. ಜಿ. ಮರಿಬಾಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 2023-24ನೇ ಸಾಲಿನಲ್ಲಿ 8, 9 ಮತ್ತು 10 ನೇ
ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು. ಎಸ್. ಆರ್. ಮತ್ತಿಕಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಘದ ಕಾರ್ಯಾಧ್ಯಕ್ಷ ಎಸ್. ಬಿ. ಹಿರೇಮಠ ಪರಿಚಯಿಸಿದರು. ಕೆ. ಎಸ್. ಹಿರೇಮಠ ಚುನಾಯಿತರಾದ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ. ವೈ.ಮಳಲಿ ನಿರೂಪಿಸಿದರು. ಸಂಘದ ಪ್ರತಿನಿಧಿಗಳಾದ ಪೂರ್ವಿ ಕಲಬುರ್ಗಿ ಹಾಗೂ ವೈಷ್ಣವಿ ವಾಲಿಕಾರ ಉಪಸ್ಥಿತರಿದ್ದರು.