

ರಾಯಚೂರು: ಶಿಕ್ಷಣವಿಲ್ಲದೆ ಜೀವನದಲ್ಲಿ ಉತ್ತಮ ಸಾಧನೆ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರು ಉನ್ನತ ಸ್ಥಾನಕ್ಕೆ ಬೆಳೆಯುವಂತೆ ಮಾಡಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ತಿಳಿಸಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಕಣಾಚಾರಿ ಆದರ್ಶ, ಮಾನವೀಯ ವೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಹಿಂದೆ ರಾಜ ಮಹಾರಾಜರು ಕಲೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಪ್ರತಿಭೆ ಇರುವವರಿಗೆ ರಾಜರು ಉತ್ತಮ ಸ್ಥಾನಮಾನ ನೀಡುತ್ತಿದ್ದರು. ತಮ್ಮ ಕಲೆಯ ಮೂಲಕ ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲುತ್ತದೆ.
ಪ್ರತಿಯೊಬ್ಬರು ತಮ್ಮ ಸ್ವಂತ ಪ್ರತಿಭೆಯ ಮೂಲಕ ಯಶಸ್ಸು ಸಾಸಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಮಕ್ಕಳ ಜತೆಗೆ ಸಮಾಜವೂ ಮುಂದುವರೆಯಲು ಸಾಧ್ಯವಾಗಲಿದೆ. ಜತೆಗೆ ಮಕ್ಕಳಲ್ಲಿ ಮಾನವೀಯ ವೌಲ್ಯಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಡಾ.ಕೆ.ಆರ್.ದುರಗೇಶ ತಿಳಿಸಿದರು.
ನಿವೃತ್ತ ಮುಖ್ಯಗುರು ಅನಂತಶಯನ ಬಡಿಗೇರ ಮಾತನಾಡಿ, ಪ್ರತಿಯೊಂದು ಲೋಹಕ್ಕೂ ಜೀವವಿದೆ ಎಂದು ತಿಳಿಸಿಕೊಟ್ಟವರು ವಿಶ್ವಕರ್ಮರು. ಮರ ಮತ್ತು ಲೋಹಗಳಿಗೆ ರೂಪ ನೀಡಿ ಅವುಗಳಿಗೆ ಜೀವ ತುಂಬಿದ ಸಮಾಜ ವಿಶ್ವಕರ್ಮ ಸಮಾಜವಾಗಿದೆ. ಜಕಣಾಚಾರಿಯವರಿಂದಾಗಿ ನಮ್ಮ ನಾಡು ಸುಂದರವಾಗುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಉತ್ತಮ ಸಾಧನೆ ಮಾಡಿದ ಶಿಲ್ಪಿಗಳಿಗೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ಕಾಳಪ್ಪ ಬಡಿಗೇರಗೆ ಸನ್ಮಾನಿಸಿ, ಗೌರವಿಸಲಾಯಿತು. ಇದಕ್ಕೂ ಮೊದಲು ವಿಶ್ವಕರ್ಮ ವೃತ್ತದಿಂದ ಕನ್ನಡ ಭವನದವರೆಗೆ ಜಕಣಾಚಾರಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಜಯಮ್ಮ, ಸಹಾಯಕ ಆಯುಕ್ತೆ ಮಹೆಬೂಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ವಿಶ್ವಕರ್ಮ ಸಮಾಜದ ಅಜ್ಜೇಂದ್ರ ಸ್ವಾಮೀಜಿ, ಸಮಾಜದ ಮುಖಂಡರಾದ ಬ್ರಹ್ಮ ಗಣೇಶ, ಮಾರುತಿ ಬಡಿಗೇರ, ಗಿರೀಶ್ ಆಚಾರ್ಯ, ವೆಂಕಟೇಶ, ಈರಣ್ಣ, ಮನೋಹರ್ ಬಡಿಗೇರ, ರವೀಂದ್ರ, ಕೆ.ರಾಮು ಗಾಣಧಾಳ ಉಪಸ್ಥಿತರಿದ್ದರು.