

ಮೈಸೂರು: ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.
ಶಿಕ್ಷಣ ತಜ್ಞ ಆರ್.ಎ. ಚೇತನ್‌ರಾಮ್ ಮಾತನಾಡಿ, ಅಧ್ಯಯನದಲ್ಲಿ ಶಿಸ್ತಿಲ್ಲದಿದ್ದರೆ ಓದು ಗೊಂದಲವಾಗುತ್ತದೆ ಹಾಗೂ ಶಿಸ್ತಿಲ್ಲದ ಜೀವನ ನಾವಿಕನಿಲ್ಲದ ಹಡಗಿನಂತಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಶಿಸ್ತಿನಿಂದ ಓದಿನಲ್ಲಿ ತೊಡಗಿ ಸಾಧನೆ ತೋರಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಪ್ರಾಧ್ಯಾ ಪಕರಾದವರಿಗೆ ಬೋಧನೆಯೊಂದೇ ಮುಖ್ಯವಲ್ಲ, ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲಬೇಕು. ಪಾಠ, ಪ್ರವಚನದ ಜತೆಗೆ ವಿದ್ಯಾರ್ಥಿಗಳಿಗೆ ಜೀವನಮೌಲ್ಯ ತಿಳಿಸಿಕೊಟ್ಟು ಬದುಕನ್ನು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಬೇಕು. ಗುರುಗಳು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಚಂದ್ರಶೇಖರ್ ಮಾತನಾಡಿ, ಇಂದು ಅಂತಾರಾಷ್ಟ್ರೀಯ ಯೋಗ ಹಾಗೂ ಸಂಗೀತ ದಿನವನ್ನು ಆಚರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ, ಧ್ಯಾನದಲ್ಲಿ ಒಂದು ಗಂಟೆಯಾದರೂ ತೊಡಗಿಸಿಕೊಂಡರೆ ಓದಿನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಸಿ.ಕೆ.ಅಶೋಕ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಶ್ರಮ ಇದ್ದರೆ ಯಶಸ್ಸು ತಾನಾಗಿಯೆ ಬರುತ್ತದೆ. ಆತ್ಮವಿಶ್ವಾಸ ಮತ್ತು ಸಮಯಪ್ರಜ್ಞೆ ಹಾಗೂ ದೃಢ ಸಂಕಲ್ಪ ಹೊಂದಬೇಕು. ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿದರೆ ಗುರಿ ಮುಟ್ಟಬಹುದು ಎಂದರು.
ಈ ಸಂದರ್ಭ ಕಳೆದ ಬಾರಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯೋಗ ದಿನದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.