ತಡಮಾಡದೆ ಪರಿಹಾರ ವಿತರಿಸಿ

30 DVD 03
ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿತು. ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ್ ಜಾಲಹಳ್ಳಿ, ಶಬ್ಬೀರ್ ಜಾಲಹಳ್ಳಿ ಇದ್ದರು.
Published on

ದೇವದುರ್ಗ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗಿದ್ದು ತಡ ಮಾಡದೆ ಪರಿಹಾರ ವಿತರಣೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಪ್ರಾಂತ ರೈತ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಮಳೆ ಬಂದಿರುವುದರಿಂದ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಸಾಲದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪ್ರಮುಖವಾಗಿ ಹತ್ತಿ, ತೊಗರಿ, ಸೂರ್ಯಕಾಂತಿ, ಶೇಂಗಾ ಸೇರಿ ಹಲವು ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆಯುತ್ತಿವೆ. ಬಿತ್ತನೆಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೂಲಿ ಸೇರಿ ಎಕರೆಗೆ 50 ಸಾವಿರ ರೂ. ಖರ್ಚು ಮಾಡಿದ್ದಾರೆ. ಆಗಸ್ಟ್‌ನಲ್ಲಿ ಕೃಷ್ಣಾ ನೆರೆ ಹಾವಳಿಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ ಅಧಿಕಾರಿಗಳು ಸರ್ವೇ ನಡೆಸಿ ವರದಿ ಸಲ್ಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಬೆಳೆನಷ್ಟ ವರದಿ ವಾರದಲ್ಲಿ ಪಡೆದು ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಕೃಷ್ಣಾ ನದಿಯಿಂದ ನೆರೆ ಉಂಟಾಗಿ ನಷ್ಟವಾದ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ್ ಜಾಲಹಳ್ಳಿ, ಶಬ್ಬೀರ್ ಜಾಲಹಳ್ಳಿ. ಮಹಾಲಿಂಗ ದೊಡ್ಡಮನಿ, ರಿಯಾಜ್, ಯೂಸೂಫ್, ಮೂರ್ತಿ, ಅಮೀರ್ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net