

ಎಚ್.ಡಿ.ಕೋಟೆ: ತಾಲೂಕಿನ ಕೊಡಸೀಗೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಸ್ಥಾನದ ವಿಚಾರವಾಗಿ ಗ್ರಾಮಸ್ಥರು ಒಮ್ಮತದ ಅಭಿಪ್ರಾಯಕ್ಕೆ ಬಾರದೆ ಇದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುತ್ತದೆ. ಅಲ್ಲಿಯವರೆಗೆ ದೇವಸ್ಥಾನದ ಬಾಗಿಲು ತೆರೆಯಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ದೇವಸ್ಥಾನದ ಪೂಜಾರಿ ಬದಲಾವಣೆ ಮಾಡಬೇಕು ಎಂದು ಕೊಡಸೀಗೆ ಗ್ರಾಮಸ್ಥರು ಮುಜರಾಯಿ ಇಲಾಖೆ ಸಚಿವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.
ಕೊಡಸೀಗೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಈ ದೇವಸ್ಥಾನದ ಉಸ್ತುವಾರಿ ಕೊಡಸೀಗೆ, ಮಲಾರ ಕಾಲನಿ, ಹೈರಿಗೆ, ಮಾದಾಪುರ ಗ್ರಾಮಸ್ಥರು ನೋಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಕೊಡಸೀಗೆ ಗ್ರಾಮಸ್ಥರು ಮುಜರಾಯಿ ಇಲಾಖೆ ಸಚಿವರಿಗೆ ದೂರು ನೀಡಿ ಪೂಜಾರಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಅರ್ಜಿ ಆಧಾರದ ಮೇಲೆ ನಾಲ್ಕು ಗ್ರಾಮದ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಮುಖಂಡರು ಒಮ್ಮತದ ಅಭಿಪ್ರಾಯಕ್ಕೆ ಬಂದರೆ ಮಾತ್ರ ದೇವಸ್ಥಾನದಲ್ಲಿ ಪೂಜೆ, ಪುರಸ್ಕಾರ ಮಾಡಲು ಅನುಮತಿ ನೀಡಲಾಗುತ್ತದೆ. ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಭೆ ಗಮನಕ್ಕೆ ತಂದರು.
ಮಲಾರ ಗ್ರಾಮದ ಪುಟ್ಟಯ್ಯ ಮಾತನಾಡಿ, ಕೊಡಸೀಗೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಸ್ಥಾನ ಆ ಗ್ರಾಮದ ವ್ಯಾಪ್ತಿಯಲ್ಲಿ ಬಂದರೂ ನಮ್ಮ ಗ್ರಾಮದ ಜನರಿಗೆ ಹೆಚ್ಚು ಮುಖ್ಯ ಆಗಿದೆ, ದೇವಸ್ಥಾನ ಕಟ್ಟಿರುವುದು ನಾವು, ದೇವಸ್ಥಾನದ ವಿಚಾರದಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಿರುವುದು ನಾವು. ಆದರೆ ಪೂಜಾರಿ ಬದಲಾವಣೆ ವಿಚಾರದಲ್ಲಿ ಕೊಡಸೀಗೆ ಗ್ರಾಮದವರು ಮಲಾರ ಹಾಗೂ ಇತರ ಗ್ರಾಮದವರ ಗಮನಕ್ಕೆ ತರದೆ ಏಕಪಕ್ಷೀಯವಾಗಿ ಮುಜರಾಯಿ ಇಲಾಖೆ ಸಚಿವರಿಗೆ ದೂರು ನೀಡಿದ್ದಾರೆ. ಪೂಜಾರಿ ಸರಿಯಲ್ಲ ಎಂದು ಕಂಡಬಂದ ಸಂದರ್ಭದಲ್ಲಿ ನಾಲ್ಕು ಗ್ರಾಮಸ್ಥರ ಗಮನಕ್ಕೆ ತಂದಿದ್ದರೆ ಎಲ್ಲ ಗ್ರಾಮದವರು ಸೇರಿ ಒಂದು ತೀರ್ಮಾನಕ್ಕೆ ಬರಬಹುದಾಗಿತ್ತು. ಆದರೆ, ಪೂಜಾರಿ ನಡವಳಿಕೆ ಬಗ್ಗೆ ನಮಗೆ ಯಾವುದೇ ದೂರು ಕೇಳಿಬಂದಿಲ್ಲ. ಹಾಗಾಗಿ ನಾಲ್ಕು ಗ್ರಾಮದ ದೇವಸ್ಥಾನ ಸಮಿತಿ ಮಾಡಿ ನಂತರ ಪೂಜಾರಿ ವಿಚಾರವಾಗಿ ಚರ್ಚೆ ಮಾಡೋಣ ಎಂದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೈರಿಗೆ ಮತ್ತು ಮಾದಾಪುರ ಗ್ರಾಮಸ್ಥರು ಧ್ವನಿಗೂಡಿಸಿದರು.
ಆದರೆ ಕೊಡಸೀಗೆ ಗ್ರಾಮಸ್ಥರು ಪೂಜಾರಿ ಬದಲಾವಣೆ ಮಾಡಬೇಕು, ಬೇರೆ ಪರ್ಯಾಯ ಪೂಜಾರಿ ನೇಮಿಸಿ ದೇವಸ್ಥಾನದ ಬಾಗಿಲು ತೆರೆದು ಪೂಜೆ ಪುರಸ್ಕಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಸಭೆ ಗಮನಕ್ಕೆ ತಂದರು.
ಸಭೆ ಒಮ್ಮತದ ಅಭಿಪ್ರಾಯಕ್ಕೆ ಬಾರದ ಕಾರಣ ತಹಸೀಲ್ದಾರ್ ಶ್ರೀನಿವಾಸ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಸಭೆ ಕೊನೆಗೊಳಿಸಿದರು.
ಗ್ರೇಟ್ 2 ತಹಸೀಲ್ದಾರ್ ಶ್ರೀಧರ್, ಸಬ್‌ಇನ್‌ಸ್ಪೆಕ್ಟರ್ ಬಿ.ಪ್ರಕಾಶ್, ಮುಜರಾಯಿ ಇಲಾಖೆ ಶಿರಸ್ತೇದಾರ್ ಸಿದ್ದರಾಜು, ಮುಖಂಡರಾದ ಎಂ.ಡಿ.ಮಂಚಯ್ಯ, ಮಲಾರ ಮಹಾದೇವು, ಕುಮಾರಸ್ವಾಮಿ, ಹೈರಿಗೆ ಮಲ್ಲೇಶ, ಶಿವರಾಜು, ಹೈರಿಗೆ ರಾಮು, ಕಾಳಯ್ಯ, ಶಿವಣ್ಣ, ಮಾದಯ್ಯ, ಕೆಂಪನಾಯಕ, ಮಲಾರ ಕುಮಾರ, ರಾಜು, ಗಣೇಶ್, ಶಂಭೇಗೌಡ, ರಾಜೇಗೌಡ, ಕುಮಾರ ಇದ್ದರು.