

ಬೆಳಗಾವಿ: ಸರ್ಕಾರದ ಪ್ರಮುಖ ಯೋಜನೆಗಳು ಸಮರ್ಪಕ ಬಳಕೆಯಾಗಬೇಕು. ಜಿಲ್ಲೆಯಲ್ಲಿ ಬಾಕಿಯಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಯಲ್ಲಿ ಪೂರ್ಣಗೊಳಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2023-24ನೇ ಸಾಲಿನ ಜಿಲ್ಲಾಮಟ್ಟದ ದಿಶಾ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ಜಮೀನುಗಳ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಈ ಕುರಿತು ಬಹಳಷ್ಟು ದೂರುಗಳು ಬರುತ್ತಿವೆ. ಕೃಷಿ ಚಟುವಟಿಕೆಗಳಿಗೆ ಕನಿಷ್ಠ 8 ಗಂಟೆ ವಿದ್ಯುತ್ ಪೂರೈಕೆಯಾಗಬೇಕು. ವಿದ್ಯುತ್ ಪೂರೈಕೆಯಲ್ಲಿ ಈಗಾಗಲೇ ಹಲವಾರು ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ತ್ವರಿತವಾಗಿ ದುರಸ್ತಿ ಕಾಮಗಾರಿ ಕೈಗೊಂಡು ವಿದ್ಯುತ್ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈಗಾಗಲೇ ಬೆಳೆಗಳಿಗೆ ವಿಮೆ ಮಾಡಿಸಲಾಗಿದ್ದು, ವಿಮಾ ಕಂಪನಿಯವರು ಕೇವಲ ಬೆಳೆ ವಿಮೆ ಕಂತು ಭರಿಸಿಕೊಳ್ಳುವುದು ಮಾತ್ರವಲ್ಲದೆ ಹಾಳಾಗಿರುವ ಬೆಳೆಗಳ ಕುರಿತು ಗಮನಹರಿಸಿ, ಕೂಡಲೇ ವಿಮೆ ಕ್ಲೇಮ್‌ಗೆ ಕ್ರಮವಹಿಸುವಂತೆ ಕೃಷಿ ಇಲಾಖೆಯ ಅದಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ನೋಂದಾಯಿತ ರೈತರಿಗೆ 14ನೇ ಕಂತು ಬಿಡುಗಡೆ ಮಾಡಲಾಗಿದೆ. ಕೆಲವರು ಈವರೆಗೂ ಇ-ಕೆವೈಸಿ ಮಾಡದೆ ಇರುವುದರಿಂದ ಬ್ಯಾಂಕ್ ಖಾತೆಗಳಲ್ಲಿ ಕಂತು ಜಮೆಯಾಗಿಲ್ಲ. ಇ-ಕೆವೈಸಿ ಮಾಡಿಸದ ರೈತರು, ಹೊಸ ಕೃಷಿಕರು ಕೆವೈಸಿ ಅಪ್ಡೇಟ್ ಮಾಡಲು ತಿಳಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.
ಸಂಸದೆ ಮಂಗಲ ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಸಬ್ಸಿಡಿ ಸಿಲಿಂಡರ್ ಒದಗಿಸಬೇಕು. ಪ್ರತಿ ಸಿಲಿಂಡರ್ ಮೇಲೆ 200 ರೂ. ಕಡಿಮೆಗೊಳಿಸಿ ದರ ಪರಿಷ್ಕರಿಸಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಉಜ್ವಲಾ ಯೋಜನೆಯ ಮರು ಪ್ರಾರಂಭಕ್ಕೆ ನಿರ್ದೇಶನ ನೀಡಿದೆ ಎಂದರು. ನರೇಗಾ, ಸಲ್ ಬಿಮಾ, ಪಿಎಂ ಆವಾಸ್ ಯೋಜನೆ, ಕೃಷಿ ಬೋರ್‌ವೆಲ್, ಪೋಷಣ್ ಅಭಿಯಾನ ಸೇರಿ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲಾದಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಹರ್ಷಲ್ ಭೋಯರ್, ಡಿಸಿಪಿ ಎಚ್.ಟಿ. ಶೇಖರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ, ಡಿಎಚ್‌ಒ ಮಹೇಶ ಕೋಣಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ್ ಕೂಲೇರ್, ರವಿ ಬಂಗಾರಪ್ಪನವರ ಹಾಗೂ ಜಿಲ್ಲಾಮಟ್ಟದ ಅದಿಕಾರಿಗಳು ಇದ್ದರು.