ಕೆಲವೇ ತಾಸಲ್ಲಿ ಕಳವು ಆರೋಪಿ ಸುಳಿವು ಪತ್ತೆ

28kgl03
ಕಾರ್ಗಲ್‌ನ ಗದ್ದೆಹಳ್ಳದ ಅಂಗನವಾಡಿ ಕೇಂದ್ರದ ಬೀರು ಒಡೆದಿರುವುದು.
Published on

ಕಾರ್ಗಲ್: ಅಂಗನವಾಡಿಯಲ್ಲಿ ಮೊಬೈಲ್, ದಿನಸಿ ಸೇರಿದಂತೆ ಹಲವು ವಸ್ತುಗಳನ್ನು ದೋಚಿದ್ದ ಆರೋಪಿಯ ಸುಳಿವನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಪಟ್ಟಣದ ಪೊಲೀಸರು, ಆರೋಪಿ ಬಾರ್‌ವೊಂದರಲ್ಲಿ ಮದ್ಯ ಸೇವನೆಗಾಗಿ ಅಡವಿಟ್ಟದ್ದ ಕಳವು ಮಾಡಿದ್ದ ಮೊಬೈಲ್‌ನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಪಟ್ಟಣದ ಗದ್ದೆಹಳ್ಳದಲ್ಲಿ ಕೆಪಿಸಿ ನಿಗಮಕ್ಕೆ ಸೇರಿದ ಹಳೆಯ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರದ ಹೆಂಚನ್ನು ತೆಗೆದು ಒಳ ನುಗ್ಗಿರುವ ಕಳ್ಳ, ಇಲಾಖೆಗೆ ಸೇರಿದ ಮೊಬೈಲ್ ಹಾಗೂ ದಿನಸಿ ವಸ್ತುಗಳನ್ನು ಕಳವು ಮಾಡಿ, ಹಿಂಬಾಗಿಲಿನ ಮೂಲಕ ಹೊರ ಹೋಗಿದ್ದ. ಶುಕ್ರವಾರದಿಂದ ರಜಾ ಇದ್ದ ಕಾರಣ ಮೂರು ದಿನಗಳಿಂದ ಇತ್ತ ಯಾರು ಸುಳಿದಿರಲಿಲ್ಲ. ಸೋಮವಾರ ಬೆಳಗ್ಗೆ ಅಂಗನವಾಡಿ ಸಿಬ್ಬಂದಿ ಬೀಗ ತೆಗೆದು ಒಳ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೆ ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮೀ ಎಂಬುವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಸಬ್‌ಇನ್ಸ್‌ಪೆಕ್ಟರ್ ಹೊಳೆ ಬಸಪ್ಪ ಹಾಗೂ ಸಿಬ್ಬಂದಿ, ಆರೋಪಿಯ ಸುಳಿವು ಪತ್ತೆ ಹಚ್ಚಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಅಂಗನವಾಡಿ ಕೇಂದ್ರದ ಸ್ಟೋರ್‌ರೂಮ್‌ನಲ್ಲಿದ್ದ ಬೇಳೆಕಾಳುಗಳು ಸೇರಿದಂತೆ ದಿನಸಿ ಸಾಮಗ್ರಿಗಳು, ಮೊದಲ ಕೊಠಡಿಯ ಬೀರುವಿನಲ್ಲಿದ್ದ ಮೊಬೈಲ್, ಚಾರ್ಜರ್, ಪವರ್‌ಬ್ಯಾಂಕ್ ಹಾಗೂ ಅಡುಗೆ ಕೋಣೆಯಲ್ಲಿದ್ದ ಮೂರು ಕುಕ್ಕರ್ ಸೇರಿ ಕೆಲವು ಸ್ಟೀಲ್ ಪಾತ್ರೆಗಳನ್ನು ಕದ್ದೊಯ್ದಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮೀ ತಿಳಿಸಿದ್ದಾರೆ.
ಈ ಸಂಬಂಧ ಇದುವರೆಗೂ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net