ಕನ್ಹೇರಿ ಶ್ರೀಗಳ ರ್ನಿಬಂಧ ಹಿಂಪಡೆಯಿರಿ

Withdraw the Kanheri Shri's Rnibandha
Published on

ವಿಜಯಪುರ;ಕನ್ಹೇರಿ ಶ್ರೀಗಳ ರ್ನಿಬಂಧಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರೇ ನೇರ ಕಾರಣ. ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಾಸ್​ ಪಡೆಯದಿದ್ದರೆ ಬಬಲೇಶ್ವರ ಮತೇತ್ರದಿಂದಲೇ ಹೋರಾಟ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್​. ಪಾಟೀಲ ನಡಹಳ್ಳಿ ಹರಿಹಾಯ್ದರು.ಕನ್ಹೇರಿ ಶ್ರೀಗಳ ಜಿಲ್ಲಾ ಪ್ರವೇಶ ರ್ನಿಬಂಧ ಹಿಂಪಡೆಯುವಂತೆ ಆಗ್ರಹಿಸಿ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದಲ್ಲಿ ಹಿಂದು ಜಾಗೃತ ವೇದಿಕೆ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ರಂಭಾಪುರಿ, ಶ್ರೀಶೈಲ ಜಗದ್ಗರುಗಳು ಸೇರಿ ಹಲವು ಜಗದ್ಗುರುಗಳ ಬಗ್ಗೆ ನಡೆದುಕೊಂಡ ರೀತಿ ಇಡೀ ಜನರಿಗೆ ಗೊತ್ತಿದೆ. ಈಗಲೂ ಅವರೇ ಕನ್ಹೇರಿ ಶ್ರೀಗಳ ಪ್ರವೇಶ ರ್ನಿಬಂಧದ ಹಿಂದೆ ಇದ್ದಾರೆ ಎಂದು ಆರೋಪಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸಿದ ನೀವು ಹಿಂದು ಅಲ್ಲ ಎನ್ನುತ್ತೀರಿ. ಆದರೆ ಮನೆಯಲ್ಲಿ ಶ್ರೀಕೃಷ್ಣನ ಪೂಜೆ ಮಾಡುತ್ತೀರಿ. ಹಾಗಾದರೆ ನೀವು ಹಿಂದು ಎಂಬುವುದು ಒಪ್ಪಿಕೊಳ್ಳಿ. ನೀವು ಆಡುವ ಮಾತು ಒಂದು, ನಡೆದುಕೊಳ್ಳುವುದು ಇನ್ನೊಂದಾಗಿದೆ. ಈ ರೀತಿ ಒಡೆದಾಳುವ ಬಗ್ಗೆ ಲಿಂಗಾಯತ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು ಎಂದರಲ್ಲದೆ, ಧರ್ಮ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಿ, ಲಿಂಗಾಯತ ಎಂದು ಬರೆಯಿಸಿ ಎಂದು ಹೇಳುವುದು ಒಡೆದಾಳುವ ಪ್ರಯತ್ನ, ಈ ಪ್ರಯತ್ನಕ್ಕೆ ಯಾರೂ ಬಲಿಯಾಗಬಾರದು ಎಂದು ಹೇಳಿದರು.

ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯ ವಿಜುಗೌಡ ಪಾಟೀಲ ಮಾತನಾಡಿ, ಕನ್ಹೇರಿ ಶ್ರೀಗಳು ಸಿದ್ಧೇಶ್ವರ ಸ್ವಾಮೀಜಿಗಳ ಅಪ್ಪಟ ಶಿಷ್ಯರು. ಅವರಿಗೆ ಮಾಡಿರುವ ಅಪಮಾನ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳಿಗೆ ಮಾಡಿದ ಅಪಮಾನವಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಕೂಡಲೇ ರ್ನಿಬಂಧ ಆದೇಶ ಹಿಂಪಡೆಯದಿದ್ದರೆ ಮುಂಬರುವ ದಿನದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಹಕಾರಿ ಧುರೀಣ ರಮೇಶ ಬಿದನೂರ ಮಾತನಾಡಿ, ಕನ್ಹೇರಿ ಶ್ರೀಗಳ ಪೂರ್ವಾಶ್ರಮ ವಿಜಯಪುರ. ಅವರಿಗೆ ಇಲ್ಲಿಯೇ ಪ್ರವೇಶ ರ್ನಿಬಂಧಿಸಿರುವುದು ಅತ್ಯಂತ ನೋವಿನ ಸಂಗತಿ. ಇಡೀ ವಿಜಯಪುರ ಅಷ್ಟೇ ಅಲ್ಲ ಇಡೀ ಕರ್ನಾಟಕ ಅವರ ನಿಷೇಧ ವಾಪಾಸ್​ ಪಡೆಯುವಂತೆ ಒತ್ತಾಯಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.

ಪ್ರತಿಭಟನಾ ಮೆರವಣಿಗೆಯೂ ಅಂಬೇಡ್ಕರ್​ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಂತರ ಮನವಿ ಸಲ್ಲಿಸಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ, ಮುಖಂಡರಾದ ಉಮೇಶ ಕಾರಜೋಳ, ಗುರುಲಿಂಗಪ್ಪ ಅಂಗಡಿ, ಉಮೇಶ ವಂದಾಲ, ರಾವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟೆ, ರಾಹುಲ್​ ಜಾಧವ, ವಿಜಯಕುಮಾರ ಕುಡಿಗನೂರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಖಣಾಪೂರ ಮತ್ತಿತರರಿದ್ದರು.

ವಿಜಯಪುರದಲ್ಲಿ ಕನ್ಹೇರಿ ಸ್ವಾಮೀಜಿಗಳ ಪ್ರವೇಶ ರ್ನಿಬಂಧ ಹಿಂಪಡೆಯುವಂತೆ ಆಗ್ರಹಿಸಿ ಹಿಂದು ಜಾಗೃತ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಎ.ಎಸ್​. ಪಾಟೀಲ ನಡಹಳ್ಳಿ, ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net