ಮಠಾಧೀಶರ ಮೇಲಿನ ಕೇಸ್​ ಹಿಂಪಡೆಯಿರಿ

DSC_3388
ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ವಿರೋಧಿಸಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಮತ್ತು ಜಿಲ್ಲಾ ಅಖಿಲ ಭಾರತ ವೀರಶೈವ&ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್​.ಪರಮೇಶ್​, ನಗರ ಕಾರ್ಯದರ್ಶಿ ಟಿ.ಬಿ.ಹರೀಶ್​, ಮಹಾಸಭಾ ಕಾರ್ಯದರ್ಶಿ ವಿಶ್ವನಾಥ್​ ಅಪ್ಪಾಜಪ್ಪ, ಕೋಶಾಧ್ಯಕ್ಷ ಜಯಣ್ಣ, ಮಹಾಸಭಾ ರಾಜ್ಯ ಕಾರ್ಯದರ್ಶಿ ಸಾಗರನಹಳ್ಳಿ ವಿಜಯಕುಮಾರ್​, ಮಹಿಳಾ ಘಟಕದ ಅಧ್ಯೆ ಮಮತ ದಿವಾಕರ್​, ಮುಖಂಡರಾದ ತಿಪ್ಪೇಸ್ವಾಮಿ, ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್​, ಜಿ.ಎಸ್​.ಶ್ರೀಧರ್​, ಸತ್ಯಮಂಗಲ ಜಗದೀಶ್​, ರಾಜೀವ್​ ಇದ್ದರು.
Published on

ಜಿಲ್ಲಾ ಪೊಲೀಸ್​ ಇಲಾಖೆಗೆ ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯ

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ವಿರೋಧಿಸಿ ಹೋರಾಟ ನಡೆಸುತ್ತಿದ್ದ ವಿವಿಧ ಮಠಾಧೀಶರು, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಅವೈಜ್ಞಾನಿಕ ಪೈಪ್​ಲೈನ್​ ಕಾಮಗಾರಿ ನಿಲ್ಲಿಸುವಂತೆ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಮತ್ತು ತುಮಕೂರು ಜಿಲ್ಲಾ ಅಖಿಲ ಭಾರತ ವೀರಶೈವ&ಲಿಂಗಾಯತ ಮಹಾಸಭಾ ಒತ್ತಾಯಿಸಿದೆ.

ಲಿಂಕ್​ ಕೆನಾಲ್​ ನಿರ್ಮಿಸಿ ನಮ್ಮ ಪಾಲಿನ ನೀರನ್ನು ಪಕ್ಕದ ಜಿಲ್ಲೆಗೆ ತೆಗೆದುಕೊಂಡು ಹೋಗುವ ಅಪಾಯಕಾರಿ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕಿರುವುದು ಜಿಲ್ಲೆಯ ರೈತರಿಗೆ ಭಾರಿ ಅನ್ಯಾಯ ಮಾಡಿದಂತೆ. ಈ ಅವೈಜ್ಞಾನಿಕ ಕಾಮಗಾರಿಯನ್ನು ತತ್​ಕ್ಷಣ ನಿಲ್ಲಿಸುವಂತೆ ಸೇವಾ ಸಮಿತಿ ಅಧ್ಯಕ್ಷ ಎಸ್​.ಜಿ.ಚಂದ್ರಮೌಳಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನಮ್ಮ ಜಿಲ್ಲೆಗೆ 25.31 ಟಿಎಂಸಿ ಪ್ರಮಾಣದಷ್ಟು ಹೇಮೆ ನೀರು ಹಂಚಿಕೆಯಾಗಿದ್ದು, ಈವರೆಗೆ ಪೂರ್ಣ ಪ್ರಮಾಣದಲ್ಲಿ ಗೊರೂರು ಜಲಾಶಯದಿಂದ ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಣಿಗಲ್​ ತಾಲೂಕನ್ನು ತೋರಿಸಿ ಮಾಗಡಿ ಹಾಗೂ ರಾಮನಗರ ಭಾಗಕ್ಕೆ ನೀರನ್ನು ಕೊಂಡೊಯ್ಯುವ ಕುತಂತ್ರ ನಡೆದಿದ್ದು, ತುರುವೇಕೆರೆ, ಗುಬ್ಬಿ, ತುಮಕೂರು ಗ್ರಾಮಾಂತರ ಹಾಗೂ ತುಮಕೂರು ನಗರ ಜನರಿಗೆ ಅನ್ಯಾಯವಾಗಲಿದೆ. ಮಾಗಡಿ, ರಾಮನಗರ ಮತ್ತು ಕನಕಪುರದ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಈ ಯೋಜನೆ ಜಾರಿಗೊಳಿಸುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಜಿಲ್ಲೆಯ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ರೈತರ ಭಾರಿ ವಿರೋಧದ ನಡುವೆಯೂ ಈ ರೀತಿಯ ವರ್ತನೆಯು ಸರ್ಕಾರದ ಮೇಲೆ ಹಾಗೂ ಜಿಲ್ಲಾಡಳಿತದ ಮೇಲೆ ಹಿಡಿತವಿಲ್ಲ ಎನ್ನುವುದನ್ನು ತೋರಿಸುತ್ತದೆ. ಕೂಡಲೇ ಅವರು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಯೋಜನೆಯನ್ನು ಸ್ಥಗಿತಗೊಳಿಸಿ ರೈತರ ಹಿತ ಕಾಯಬೇಕು. ಈಗಾಗಲೇ ಹೋರಾಟದಲ್ಲಿ ಭಾಗಿಯಾಗಿರುವ ಅಮಾಯಕ ರೈತರು, ರೈತಪರ ಹೋರಾಟಗಾರರು, ಮಠಾಧೀಶರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಇಡೀ ಸಮುದಾಯ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಕುಣಿಗಲ್​ಗೆ ನೀರು ನೀಡಲು ಅಭ್ಯಂತರವಿಲ್ಲ: ಕುಣಿಗಲ್​ಗೆ ನೀರು ನೀಡಲು ನಮ್ಮ ಅಭ್ಯಂತರವಿಲ್ಲ. ಅಧುನೀಕರಣಗೊಂಡ ನಾಲೆಯ ಮೂಲಕ ಸ್ವಾಭಾವಿಕವಾಗಿ ನೀರು ತೆಗೆದುಕೊಂಡು ಹೋಗಲಿ. ಅದನ್ನು ಬಿಟ್ಟು ಸಾವಿರಾರು ಕೋಟಿ ಖರ್ಚು ಮಾಡಿ ಎಕ್ಸ್​ ಪ್ರೆಸ್​ ಕೆನಾಲ್​ ಮೂಲಕ ನೀರು ಹರಿಸುವ ಅಗತ್ಯವಿಲ್ಲ. ಇದನ್ನು ಜನಪ್ರತಿನಿಧಿಗಳು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ವೀರಶೈವ ಸಮಾಜದ ಕಾರ್ಯದರ್ಶಿ ಟಿ.ಬಿ.ಹರೀಶ್​, ಮಹಾಸಭಾ ಕಾರ್ಯದರ್ಶಿ ವಿಶ್ವನಾಥ್​ ಅಪ್ಪಾಜಪ್ಪ, ಕೋಶಾಧ್ಯಕ್ಷ ಜಯಣ್ಣ, ಮಹಾಸಭಾ ರಾಜ್ಯ ಕಾರ್ಯದರ್ಶಿ ಸಾಗರನಹಳ್ಳಿ ವಿಜಯಕುಮಾರ್​, ಮಹಿಳಾ ಘಟಕದ ಅಧ್ಯೆ ಮಮತ ದಿವಾಕರ್​, ಮುಖಂಡರಾದ ತಿಪ್ಪೇಸ್ವಾಮಿ, ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್​, ಜಿ.ಎಸ್​.ಶ್ರೀಧರ್​, ಸತ್ಯಮಂಗಲ

ಜಗದೀಶ್​, ರಾಜೀವ್​ ಮತ್ತಿತರರು ಇದ್ದರು.

ನೆಲ, ಜಲದ ವಿಷಯದಲ್ಲಿ ರಾಜಿ ಇಲ್ಲ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್​. ಪರಮೇಶ್​ ಮಾತನಾಡಿ, ಜಿಲ್ಲೆಯ ನೆಲ-ಜಲದ ವಿಷಯದಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುವ ಮಠಾಧೀಶರ ಮೇಲೆ ಪ್ರಕರಣ ದಾಖಲಿಸುವ ದೂರ್ತನದ ಕೆಲಸ ಮಾಡಿ ಜಿಲ್ಲಾ ಪೊಲೀಸ್​ ಇಲಾಖೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್​ ಹಾಗೂ ಈ ಸರ್ಕಾರ ಪ್ರಕರಣವನ್ನು ಹಿಂಪಡೆಯುವುದರ ಜತೆಗೆ ಮಠಾಧೀಶರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ವೀರಶೈವ ಸಮಾಜ ಬೀದಿಗಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net