

ಸಿದ್ದಾಪುರ: ತಾಲೂಕಿನ ಮನಮನೆ ಗ್ರಾಪಂ ವ್ಯಾಪ್ತಿಯ ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನು ಮಂಜೂರು ಮಾಡಿದ ಠರಾವನ್ನು ರದ್ದುಪಡಿಸುವಂತೆ ಆಗ್ರಹಿಸಿ ಹಾಗೂ ಅ. 1ರೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಅ. 3ರಂದು ಗ್ರಾಪಂ ಎದುರು ಸ್ಥಳೀಯ ಸಾರ್ವಜನಿಕರು ವಿವಿಧ ಸಂಘಟನೆಯವರ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಕೋಡ್ಕಣಿ ಹೋಬಳಿಯ ಮಳಲವಳ್ಳಿ ಗ್ರಾಮದ ಸ. ನಂ: 64, 65, 66 ಹಾಗೂ 67ರಲ್ಲಿ 47-06-00 ಜಮೀನನ್ನು ಮಳಲವಳ್ಳಿಯ ಹಾಗೂ ಸುತ್ತಮುತ್ತ ಗ್ರಾಮಸ್ಥರ ಹಿತ ಕಡೆಗಣಿಸಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಮಂಜೂರಿ ಮಾಡುವಂತೆ ಗ್ರಾಮ ಪಂಚಾಯಿತಿಯಿಂದ ಠರಾವು ಮಾಡಿ ಅದರ ಪ್ರತಿ ನೀಡಿರುವುದಾಗಿ ನಮ್ಮ ಗಮನಕ್ಕೆ ಬಂದಿದೆ.
ಮಳಲವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಹೆಚ್ಚಿನವರು ಕೃಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜಮೀನನ್ನು ಜಾನುವಾರು ಮೇವಿಗಾಗಿ ಉಳಿಸಿಕೊಂಡು ನಮ್ಮ ಪೂರ್ವಜರು ಬಂದಿದ್ದಾರೆ. ಜಮೀನುಗಳನ್ನು ಕೈಗಾರಿಕಾ ವಲಯ ಸ್ಥಾಪನೆಗಾಗಿ ಕೆಎಸ್ಎಸ್.ಐಡಿಸಿ ವಶಪಡಿಸಿಕೊಂಡಲ್ಲಿ ನಮ್ಮ ಜಾನುವಾರು ಮೇಯಿಸಲು ಎಲ್ಲಿಯೂ ಸ್ಥಳ ಇಲ್ಲ ಎನ್ನುವುದು ತಿಳಿದಿದ್ದರೂ ಸಹ ಗ್ರಾಮದ ಸಾರ್ವಜನಿಕರಿಗೆ ಮಾಹಿತಿ ನೀಡದೇ ಏಕಾ ಏಕಿ ತೀರ್ಮಾನ ಮಾಡಿ ಠರಾವು ಮಾಡಿರುವುದು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ.
ಆದ್ದರಿಂದ ಕೈಗಾರಿಕಾ ವಲಯ ಸ್ಥಾಪನೆಗಾಗಿ ಮಾಡಿರುವ ಠರಾವನ್ನು ಸಾರ್ವಜನಿಕರ ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಅ.1ರೊಳಗಾಗಿ ಹಿಂಪಡೆಯಬೇಕು. ಇಲ್ಲದಿದ್ದರೆ ಮಳಲವಳ್ಳಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳೊಂದಿಗೆ ಗ್ರಾಪಂ ಕಾರ್ಯಾಲಯದ ಎದುರು ಅ.3 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯನ್ನು ಗ್ರಾಪಂ ಕಾರ್ಯದರ್ಶಿ ಕೇಶವ ಗೌಡ ಅವರಿಗೆ ಸಲ್ಲಿಸಿದರು. ಊರಿನ ಅಧ್ಯಕ್ಷ ವೆಂಕಟೇಶ ಹನುಮ ನಾಯ್ಕ, ಕೈಗಾರಿಕಾ ಸ್ಥಾಪನೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲ ವಿ. ನಾಯ್ಕ, ರಾಮಚಂದ್ರ ನಾಯ್ಕ, ರಮೇಶ್ ರಾಮ ನಾಯ್ಕ, ತಿರುಪತಿ ಚೌಡ ನಾಯ್ಕ, ಅಣ್ಣಪ್ಪ ನಾಯ್ಕ ಮತ್ತಿತರರಿದ್ದರು.