ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆದು ಅಭಿವೃದ್ಧಿಗೆ ಅನುದಾನ ನೀಡುವಂತೆ ಕರ್ನಾಟಕ ಪ್ರಜಾ ಪಕ್ಷ (ರೈತ ಪರ್ವ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಗ್ಯಾರಂಟಿಗಳಿಗೆ ಅನುದಾನ ಮೀಸಲಿಟ್ಟಿರುವುದರಿಂದ ರಾಜ್ಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದಂತಾಗಿದೆ. ಆದ್ದರಿಂದ ಅನ್ನಭಾಗ್ಯ ಒಂದನ್ನು ಬಿಟ್ಟು ಉಳಿದ ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯಬೇಕು ಎಂದು ಪಕ್ಷದ ಅಧ್ಯಕ್ಷ ಬಿ.ಶಿವಣ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಬಸ್ ಉಚಿತ ಪ್ರಯಾಣದ ಯೋಜನೆಗಾಗಿ ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಮಾರಕವಾಗುವ ರೀತಿ ಬಳಸುವಂತಾಗಿದೆ. ಸಾರ್ವಜನಿಕರು ಹಾಗೂ ರೈತಾಪಿ ವರ್ಗದವರಿಗೆ ಅನುಕೂಲವಾಗುವಂತಹ ವಿದ್ಯುತ್, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಸೌಲಭ್ಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳು ಅಭಿವೃದ್ಧಿ ಕಾಣದಂತಾಗಿವೆ. ಹಾಗಾಗಿ ಯಾವುದೇ ಉಚಿತ ಯೋಜನೆಗಳಿಂದ ದೇಶ ಮತ್ತು ರಾಜ್ಯಕ್ಕೆ ಅನುಕೂಲವಾಗುವುದಕ್ಕಿಂತಲೂ ಭವಿಷ್ಯತ್ತಿನಲ್ಲಿ ಅಪಾಯಕಾರಿ. ಆದ್ದರಿಂದ, ಕೂಡಲೇ ನಾಲ್ಕು ಯೋಜನೆಗಳನ್ನು ಮುಖ್ಯಮಂತ್ರಿಗಳು ವಾಪಸ್ ಪಡೆಯಬೇಕು. ಇಲ್ಲವಾದರೆ ಬೆಂಗಳೂರಿಗೆ ಬೈಕ್ ರ‌್ಯಾಲಿ ನಡೆಸಲಾಗುವುದು ಎಂದು ಹೇಳಿದರು.
ಪಕ್ಷದ ವಿವಿಧ ಘಟಕಗಳಿಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಪದಾಧಿಕಾರಿಗಳಾದ ಪಿ.ಕುಮಾರಸ್ವಾಮಿ, ಮೋಹನ್‌ದಾಸ್, ಶಿವು, ಆರ್.ಶ್ರೀನಿವಾಸ್, ಶುಭಶ್ರೀ, ಪುಷ್ಪಾವತಿ ಇದ್ದರು.