ರೈಲು ಸಂಚಾರ ರದ್ದು ಆದೇಶ ಹಿಂಪಡೆಯಿರಿ

rajat railu
Published on

ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು (07339/07340) ಸೇರಿ ಇತ್ತೀಚೆಗೆ ರದ್ದು ಪಡಿಸಿರುವ ಎಲ್ಲ ರೈಲುಗಳ ಸಂಚಾರವನ್ನು ಪುನಃ ಆರಂಭಿಸಬೇಕು ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಹಾಗೂ ಹು-ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಆಗ್ರಹಿಸಿದ್ದಾರೆ.

ಈ ಕುರಿತು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸಂಚರಿಸುತ್ತಿರುವ ರೈಲುಗಳನ್ನು ಹಠಾತ್​ನೇ ರದ್ದುಪಡಿಸುತ್ತಿರುವುದು ಖಂಡನೀಯ. ಎಲ್ಲ ಬಗೆಯ ಆಸನಗಳನ್ನು ಸಂಪೂರ್ಣವಾಗಿ ಬುಕ್ ಆಗಿದ್ದರೂ ಕೊನೆ ಕ್ಷಣದಲ್ಲಿ ಸಂಚಾರ ರದ್ದುಪಡಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ರೈಲ್ವೆಯ ವಾಣಿಜ್ಯ ವಿಭಾಗದ ದಾಖಲೆಗಳ ಪ್ರಕಾರ ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್ ರೈಲು (07339/07340) ಶೇ. 100 ರಷ್ಟು ಭರ್ತಿಯೊಂದಿಗೆ ಸಂಚರಿಸುತ್ತಿತ್ತು. ವಾರದ ಕೊನೆಯ ದಿನಗಳ ಸಂಚಾರದಲ್ಲಿ ನೂರಾರು ಪ್ರಯಾಣಿಕರು ವ್ಹೇಟಿಂಗ್ ಲಿಸ್ಟ್​ನಲ್ಲಿ ಇರುತ್ತಿದ್ದರು. ಆದರೆ, ಪ್ರಯಾಣಿಕರ ಕೊರತೆಯ ಕಾರಣವನ್ನು ನೀಡಿ ಈ ರೈಲು ಸಂಚಾರವನ್ನು ರದ್ದುಪಡಿಸಿರುವುದು ಖಂಡನೀಯ. ಉತ್ತರ ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳ ಪ್ರಯಾಣಿಕರಿಗೆ ರಾಜಧಾನಿ ಬೆಂಗಳೂರಿಗೆ ತೆರಳಲು ಈ ರೈಲು ಅನುಕೂಲಕರವಾಗಿತ್ತು. ತಕ್ಷಣ ರೈಲು ಸಂಚಾರ ರದ್ದು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net