

ಮೈಸೂರು: ಸುಳ್ಳಿನ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಯಾವ ಮುಖ ಹೊತ್ಕೊಂಡು ಮತ ಕೇಳಲು ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಕೃಷ್ಣರಾಜ ಕ್ಷೇತ್ರದಲ್ಲಿ ಶನಿವಾರ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸುಳ್ಳು ಹೇಳಿದರೆ ಜನ ಮೋದಿ ಮೋದಿ ಎನ್ನುತ್ತಾರೆ ಎಂದು ಅವರಿಗೂ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳೋದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.
ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ, ವಿದೇಶದಿಂದ ಕಪ್ಪು ಹಣ ತರುತ್ತೇನೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಡೀಸೆಲ್, ಪೆಟ್ರೋಲ್, ಸಿಲಿಂಡರ್, ರಸಗೊಬ್ಬರದ ಬೆಲೆ ಕಡಿಮೆ ಮಾಡುತ್ತೇವೆ, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸುತ್ತೇವೆ ಎಂದಿದ್ದರು. ಆದರೆ ಅದು ಯಾವುದೂ ಆಗಿಲ್ಲ ಎಂದು ದೂರಿದರು.
ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ವಂಚಿಸಿದರು. ಹತ್ತು ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೇ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತಾ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಬಂದಾಗ, ಪ್ರವಾಹ ಬಂದಾಗ ಬರಲಿಲ್ಲ. ಕೇವಲ ಚುನಾವಣೆ ಹಿನ್ನೆಲೆಯಲ್ಲಿ ಮತ ಕೇಳಲು ಮೋದಿ ಬರುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಬರ ಪರಿಹಾರದ ಅನುದಾನ ಇದುವರೆಗೂ ನೀಡಿಲ್ಲ ಎಂದು ದೂರಿದರು.
ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದು ಹೇಳಿದ ಮಾತು ಏನಾಯ್ತು? ಕೇಂದ್ರದಿಂದ ರಾಜ್ಯದ ರಸ್ತೆ, ರೈಲ್ವೆ ಮಾರ್ಗದ ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದ್ದೀರಿ? ರಾಜ್ಯದ ತೆರಿಗೆ ಪಾಲಿನ ಹಣವನ್ನು ನೀಡದೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಮೈಸೂರು-ಕೊಡಗಿನ ಜನತೆ ಎರಡು ಬಾರಿ ಬಿಜೆಪಿಗೆ ಅವಕಾಶ ಕೊಟ್ಟಾಗ ಪ್ರತಾಪಸಿಂಹ ಯಾವ ವಿಶೇಷ ಕೆಲಸವನ್ನು ಮಾಡಲಿಲ್ಲ. ರಾಜ್ಯದಿಂದ ಆಯ್ಕೆಯಾಗಿದ್ದ ಬಿಜೆಪಿ ಸಂಸದರು, ಶಾಸಕರು, ಮುಖ್ಯಮಂತ್ರಿಯಾಗಿದ್ದರೂ ಕರ್ನಾಟಕಕ್ಕೆ ಅನ್ಯಾಯವಾದಾಗ ಅದನ್ನು ಸರಿಪಡಿಸುವಂತೆ ಪ್ರಧಾನಿ ನರೇಂದ್ರಮೋದಿ ಮುಂದೆ ಧೈರ್ಯವಾಗಿ ಏನನ್ನೂ ಕೇಳಲಿಲ್ಲ ಎಂದು ಛೇಡಿಸಿದರು.
ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮ ಕೊಟ್ಟರು. ಸ್ವಾತಂತ್ರೃ ನಂತರ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಬಡತನ ನಿರ್ಮೂಲನೆಗೆ ಇಂದಿರಾ ಗಾಂಧಿಯವರು 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು. ಕೇವಲ ಅತ್ಯಂತ ಶ್ರೀಮಂತರಿಗಾಗಿ ಕೆಲಸ ಮಾಡಿದ ಮೋದಿ ಬಡವರಿಗಾಗಿ, ಬಡತನ ಹೋಗಲಾಡಿಸಲು ಒಂದಂಶದ ಕಾರ್ಯಕ್ರಮ ಏಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಹಾಲಿ ಸಂಸದರು ಸೋಲುತ್ತಾರೆ ಎಂದು ಈಗ ಕೇವಲ ಅಭ್ಯರ್ಥಿಯನ್ನು ಬದಲಾಯಿಸಿ ಮತ ಕೇಳುತ್ತಿದ್ದಾರೆ. ಮೋದಿ ಬಡವರು, ದುಡಿಯವ ವರ್ಗಗಳ ಪರವಾಗಿ, ಮಹಿಳೆಯರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ. ಕೇವಲ ಸುಳ್ಳುಗಳನ್ನು ಸೃಷ್ಟಿಸಿ, ಭಾವನಾತ್ಮಕವಾಗಿ ಕೆರಳಿಸುವವರಿಗೆ ಮತ ಹಾಕಿದರೆ ನೀವು ಮೋಸಹೋದಂತೆ ಎಂದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು? ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು? ಶಾಲೆ-ಹಾಸ್ಟೆಲ್ಗಳನ್ನು ಮಾಡಿದವರು ಯಾರು? ಬೆಂಗಳೂರು-ಮೈಸೂರು ಹೆದ್ದಾರಿಗೆ ನಮ್ಮ ಅವಧಿಯಲ್ಲಿ ಆಸ್ಕರ್ ಫರ್ನಾಂಡಿಸ್ ಅನುಮೋದನೆ ಕೊಟ್ಟಿದ್ದು ನಮ್ಮದು ಎಂದು ಬಿಜೆಪಿಯವರು ಹೇಳುತ್ತಾರೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಿದರೂ, ನಾವು ಮತ್ತೆ ಆರಂಭಿಸಿದ್ದೇವೆ. ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಕೊಟ್ಟ ಸರ್ಕಾರ ಯಾವುದು? ಎನ್ನುವುದು ಮೈಸೂರಿನ ಪ್ರಜ್ಞಾವಂತರಿಗೆ ಗೊತ್ತು ಎಂದು ತಮ್ಮ ಸಾಧನೆಯನ್ನು ಮುಂದಿಟ್ಟರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಶಾಸಕ ಕೆ.ಹರೀಶ್‌ಗೌಡ, ಮಾಜಿ ಸಚಿವ ಬಿ.ಸೋಮಶೇಖರ್, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ವೇಣುಗೋಪಾಲ್, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಡಾ.ಯತೀಂದ್ರ, ಡಾ.ಭಾರತೀ ಶಂಕರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕೆ.ಆರ್.ಮೋಹನ್‌ಕುಮಾರ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮುಖಂಡರಾದ ಬಿ.ಸಿದ್ದರಾಜು, ಎಚ್.ಎ.ವೆಂಕಟೇಶ್, ಸುಶೀಲಾ ಕೇಶವಮೂರ್ತಿ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಹಿಳಾ ಘಟಕರ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ ಇತರರು ಇದ್ದರು.