

ಮಡಿಕೇರಿ: ಸಹಕಾರ ಸಂಘದ ಸದಸ್ಯರ ಸಂಪೂರ್ಣ ಸಹಕಾರವಿದ್ದರೆ ಸಂಘ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.
ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಪ್ರಸಕ್ತ ಸಾಲಿನಲ್ಲಿ ೫೦ ಲಕ್ಷ ಲಾಭಗಳಿಸಿದ್ದು ಸದಸ್ಯರಿಗೆ ಶೇ.೧೫ ಡಿವಿಡೆಂಟ್ ನೀಡುತ್ತಿದ್ದೇವೆ. ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಜಾಗ ಖರೀದಿ, ನರೇಂದ್ರ ಮೋದಿ ಭವನ, ಪುಣ್ಯಕೋಟಿ ಭವನ, ಈರಳೆ ಶಾಖೆಯಲ್ಲಿ ಪಂಚಮುಖಿ ವಾಯು ಪುತ್ರ ವಾಣಿಜ್ಯ ಸಂಕೀರ್ಣ ಹಾಗೂ ವಸತಿಗೃಹ, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ೫ ರೂಪಾಯಿಗೆ ನೀರಿನ ಘಟಕ, ಕಾಫಿ ಗುಣಮಟ್ಟ ಕೇಂದ್ರ, ಸಿಸಿ ಕ್ಯಾಮಾರಾ ಅಳವಡಿಸುವ ಮೂಲಕ ಚೆಟ್ಟಳ್ಳಿ ಸಹಕಾರ ಸಂಘದ ಮಾದರಿಯಾಗಿದೆ ಎಂದರು.
ಸಂಘದ ಕೆಲವು ಸದಸ್ಯರು ಸಂಘದ ಮೇಲೆ ದಾವೆ ಹೂಡಿರುವುದರಿಂದ ರಾಜ್ಯ ಮಟ್ಟದಲ್ಲಿ ಗುರತಿಸಿಕೊಳ್ಳಬೇಕಿದ್ದ ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಹಿನ್ನಡೆ ಉಂಟಾಗಿದೆಂದು ಮಣಿ ಉತ್ತಪ್ಪ ಬೇಸರ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮೃತಪಟ್ಟ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಮಹಾಸಭೆಯ ನಡಾವಳಿಕೆಯ ಅಂಗಿಕಾರ, ಆಡಳಿತ ಮಂಡಳಿ ವರದಿ, ಮುಂದಿನ ಬಜೆಟ್ ಅಂಗಿಕಾರ, ಮುಂದಿನ ಯೋಜನೆ, ನಿವ್ವಳ ಲಾಭದ ವಿಲೇವಾರಿ ಮಾಡಲಾಯಿತು. ಸಂಘದ ಮುಂದಿನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಸಹಕಾರ ಸಂಘಕ್ಕೆ ಮಣಿಉತ್ತಪ್ಪನವರ ನಿರಂತರ ಹೋರಾಟ ಹಾಗೂ ಸೇವೆಯ ಬಗ್ಗೆ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ ಶ್ಲಾಘಿಸಿದರು.
ಸನ್ಮಾನ: ಮಹಾಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪುತ್ತರಿರ ಕರುಣ್ ಕಾಳಯ್ಯ, ಎಚ್.ಟಿ.ಅನಿಲ್, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಂಘದ ಉಪಾಧ್ಯಕ್ಷ ಕಜಾಜಾಲು ಪೂವಯ್ಯ, ಜಾಗ ದಾನಿಗಳು ಹಾಗೂ ಪಟ್ಟೆದಾರ ಚೋಳಪಂಡ ಪೊನ್ನಪ್ಪ, ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ, ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್ಟ್ ವಿಭಾಗದಲ್ಲಿ ಎರಡನೇ ಸ್ಥಾನಗೈದ ಬಲ್ಲಾರಂಡ ಅಶಿಕ ತಿಮ್ಮಯ್ಯ, ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ಹಾಕಿಕ್ರೀಡೆಯಲ್ಲಿ ಸಾಧನೆ ಗೈದ ಮರದಾಳು ಯಶಿಕಾಳ ಪಾಲಕರಿಗೆ ಸನ್ಮಾನಿಸಲಾಯಿತು. ಸಂಘದಲ್ಲಿ ಸಿಮೆಂಟು ಖರೀದಿಸಿ ಮನೆ ನಿರ್ಮಾಣ ಮಾಡಿದ ಸದಸ್ಯ ರಿಗೆ ಗೌರವ ಸಲ್ಲಿಸಲಾಯಿತು.
ಮುಖ್ಯಕಾರ್ಯನಿವಹಣಾಧಿಕಾರಿ ನಂದಿನಿ, ಉಪಾಧ್ಯಕ್ಷ ಕಣಜಾಲು ಪೂವಯ್ಯ, ಸಂಘದ ನಿರ್ದೇಶಕರಾದ ನೂಜಿಬೈಲು ನಾಣಯ್ಯ, ಪುತ್ತರಿರ ಸೀತಮ್ಮ, ಕೊಗೇಟಿರ ವಾಣಿ ಕಾಳಪ್ಪ, ಪುತ್ತರಿರ ಶಿವುನಂಜಪ್ಪ, ಬಟೀರ ಅಪ್ಪಣ್ಣ, ಮರದಾಳು ಉಲ್ಲಾಸ, ಅಡಿಕೇರ ಜಯಾ, ಪೇರಿಯನ ಪೂಣಚ್ಚ, ಧನಂಜಯ, ಕಾಶಿ, ಆಂತರಿಕ ಲೆಕ್ಕಪರಿಶೋಧಕ ರಮೇಶ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಜ್ಯೋತಿ ಹಾಜರಿದ್ದರು.