

ಅಥಣಿ ಗ್ರಾಮೀಣ: ಆಧುನಿಕ ಯುಗದಲ್ಲಿ ಸ್ವಾರ್ಥ ರಹಿತ ಮತ್ತು ತ್ಯಾಗ ಸಹಿತ ಕಾಯಕದಿಂದ ಜೀವನದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ನದಿ ಇಂಗಳಗಾಂವ ಗುರುಲಿಂಗಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಬಡಚಿ ಗ್ರಾಮದ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಳ್ಳೂರಿನ ಲಿಂಗೈಕ್ಯ ಮುರುಘೇಂದ್ರ ಸ್ವಾಮೀಜಿ ಗುರು ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಅಧ್ಯಾತ್ಮದಿಂದ ಶಾಂತಿ, ನೆಮ್ಮದಿ ಸಾಧ್ಯ. ಆಡಂಬರಕ್ಕೆ ಬಲಿಯಾಗದೆ ಸತ್ಯ, ನಿಷ್ಠೆಯಿಂದ ಹಣ ಗಳಿಸಬೇಕು ಎಂದರು.
ಹಲ್ಯಾಳ ಗುರುಸಿದ್ಧೇಶ್ವರ ವಿರಕ್ತಮಠದ ಅಭಿನವ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಮಠ, ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಧಾರ್ಮಿಕ ಜಾಗೃತಿ ಮೂಡುತ್ತದೆ ಎಂದು ಹೇಳಿದರು.
ಬಡಚಿ ವಿರಕ್ತಮಠದ ಡಾ.ಮಹೇಶ ದೇವರು ಮಾತನಾಡಿದರು. ಶಿವಶಂಕರ ಬಡಿಗೇರ, ಸುರೇಶ ಆಜೂರ, ಅಣ್ಣಪ್ಪ ಬಾಡಗಿ, ದೀಪಕ ಹಟ್ಟಿ, ಎ.ಎಸ್.ನಾಯಿಕ, ಮಲಗೌಡ ಪಾಟೀಲ, ವಿಠ್ಠಲ ಗಲಬಿ, ನಾಗಪ್ಪ ಗುರವ, ಮಹೇಶ ಚಂಡಕಿ ಇತರರಿದ್ದರು.