

ಚಿಕ್ಕೋಡಿ: ಕ್ಯಾನ್ಸರ್ ರೋಗಕ್ಕೆ ಯುವಜನರು ತುತ್ತಾಗುತ್ತಿರುವುದು ಆತಂಕಕಾರಿ. ಸೂಕ್ತ ಜೀವನಶೈಲಿ, ಪ್ರಾರಂಭದಲ್ಲಿ ರೋಗಪತ್ತೆಯಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಮುಕ್ತರಾಗಬಹುದು ಎಂದು ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯ ಡಾ.ರಾಘವೇಂದ್ರ ಸಾಗರ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ವಿಭಾಗದಿಂದ ಈಚೆಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರಲ್ಲಿ ಗರ್ಭಕಂಟ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಪದವಿ ಹಂತದ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಲಕ್ಷಣಗಳ ಕುರಿತು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಋತುಚಕ್ರ ಸಮಯದಲ್ಲಿ ಮಹಿಳೆಯರು ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯ. 20-35 ವಯಸ್ಸಿನ ಹೆಣ್ಣು ಮಕ್ಕಳು
ಸಮಸ್ಯೆಗಳಿದ್ದಲ್ಲಿ ವೈದ್ಯರ ಬಳಿ ಪರೀಕ್ಷೆ ಮಾಡಿಕೊಳ್ಳಬೇಕು. ಆಹಾರದಲ್ಲಿನ ಬದಲಾವಣೆ, ಪೋಷಕಾಂಶಗಳ ಕೊರತೆ, ರಸಾಯನಿಕ ತರಕಾರಿ ಸೇವನೆ ಕ್ಯಾನ್ಸರ್ ರೋಗಕ್ಕೆ ಕಾರಣ. ಕ್ಯಾನ್ಸರ್ ರೋಗದಿಂದ ಮುಕ್ತರಾಗಲು ಸಾವಯವ ಮತ್ತು ನೈಸರ್ಗಿಕ ತರಕಾರಿ ಮತ್ತು ಕಾಳುಗಳನ್ನು ಸೇವಿಸುವುದು ಮುಖ್ಯ ಎಂದು ಸಲಹೆ ನೀಡಿದರು.
ಕ್ಯಾನ್ಸರ್ ತಜ್ಞ ವೈದ್ಯ ಡಾ. ಸ್ವಾತಿ ಗೌಡರ ಮಾತನಾಡಿ, ದುಶ್ಚಟಗಳ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಕೋಟಿಗಳಲ್ಲಿ ಸೇರುತ್ತಿರುವುದು ದುರ್ದೈವದ ಸಂಗತಿ. ಕ್ಯಾನ್ಸರ್‌ಗೆ ಭಯಪಡದೆ ಸತತ ಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆಗಳ ಮೂಲಕ ರೋಗದಿಂದ ಮುಕ್ತರಾಗಲು ಸಾಧ್ಯ ಎಂದು ಹೇಳಿದರು. ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ.ಕುಲಕರ್ಣಿ, ಮಹಿಳಾ ಸಬಲೀಕರಣ ಕೋಶದ ಸಂಚಾಲಕಿ ಡಾ. ಗೀತಾಂಜಲಿ ದೊಡ್ಡಮನಿ, ಮಲ್ಲಿಕಾ ಅಸೋದೆ, ಪೂಜಾ ಡೊಳ್ಳೆ,
ಪ್ರಜಕ್ತಾ ಮೇಘನ್ನವರ, ಅನುಜಾ ಮೇತ್ರೆ ಇತರರಿದ್ದರು.