

ಕಟಕೋಳ: ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಪರಿಶ್ರಮದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ನಿಶ್ಚಿತ. ವಿದ್ಯಾರ್ಥಿಗಳು ಹೆತ್ತವರು ಹಾಗೂ ಶಿಕ್ಷಕರ ನಂಬಿಕೆಯನ್ನು ಹುಸಿಗೊಳಿಸದೆ ವಿದ್ಯಾರ್ಜನೆ ಮಾಡಬೇಕು ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಸವರಾಜ ಉಮರಾಣಿ ಹೇಳಿದರು.
ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬದಲಿಗೆ ಪುಸ್ತಕದ ಪ್ರೇಮಿಗಳಾಗಬೇಕು. ನಿರಂತರ ಅಧ್ಯಯನ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ಗಣಿತದ ಸಂಕಲನ, ವ್ಯವಕಲನ, ಭಾಗಾಕಾರ ಮತ್ತು ಗುಣಾಕಾರ ಸೇರಿ ವಿವಿಧ ಪ್ರಕಾರಗಳನ್ನು ಕ್ಷಣಾರ್ಧದಲ್ಲಿ ಉತ್ತರ, ನಿಖರ ವೇಳೆ ತಿಳಿಯುವುದು ಹಾಗೂ ಜನ್ಮ ದಿನಾಂಕ ಹೇಳುವ ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಅವರ ಕೌಶಲಕ್ಕೆ ವಿದ್ಯಾರ್ಥಿಗಳು ಬೆರಗಾದರು. ಪ್ರಾಚಾರ್ಯರಾದ ಪಾಂಡುರಂಗ ಪಾಟೀಲ, ಐ.ಎಸ್.ಸೂಳಿಭಾವಿ ಇತರರಿದ್ದರು. ಶಿಕ್ಷಕ ಎಸ್.ಎಸ್.ಉಮಚಗಿ ಸ್ವಾಗತಿಸಿದರು. ಕಿರಣ ಮೇತ್ರಿ ಪರಿಚಯಿಸಿದರು, ಓಂಕಾರ ಗೌಡರ ನಿರೂಪಿಸಿದರು ಹಾಗೂ ಎ.ಎಸ್.ದೊಡ್ದಹುಬ್ಬಳ್ಳಿ ವಂದಿಸಿದರು.