

ಬೆಳಗಾವಿ: ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ನಿಷ್ಠೆಯಿಂದ ಅಭ್ಯಾಸದಲ್ಲಿ ತೊಡಗಿ ಸಾಫಲ್ಯ ಹೊಂದಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ರಾಜಶ್ರೀ ಜೈನಾಪುರೆ ತಿಳಿಸಿದರು.
ನಗರದ ಕೆಎಲ್‌ಇ ಲಿಂಗರಾಜ ಮಹಾವಿದ್ಯಾಲಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ. ಪರಿಶ್ರಮದಿಂದ ಸಾಸಬೇಕು ಹಾಗೂ ದೊರೆತ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ನಿರ್ದಿಷ್ಟ ಗುರಿ ತಲುಪಬೇಕು. ಜೀವನದಲ್ಲಿ ಬರುವ ಎಡರು-ತೊಡರು ಸಮರ್ಥವಾಗಿ ಎದುರಿಸಿ ಸಾಧನೆ ಮಾಡಬೇಕು ಎಂದರು.
ವರ್ಲ್ಡ್ ಯುನಿವರ್ಸಿಟಿ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದು ವಿಶೇಷ ಸಾಧನೆಗೈದ ಮಹಾವಿದ್ಯಾಲಯದ ಬಿ.ಕಾಂ ಎರಡನೇ ಸೆಮಿಸ್ಟರ್‌ನ ವಿದ್ಯಾರ್ಥಿ ಶ್ರೀನಾಥ ದಳವಿ, ಅಂಡರ್ 20 ಏಷಿಯನ್ ಗುಡ್ಡಗಾಡು ಓಟ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದ ಬಿ.ಎ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ವಿಜಯ ಸಾವತಕರ್, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಬಿ.ಎ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ಕಿರಣ ವಾಲ್ಮೀಕಿ ಮತ್ತು ಐದು ವರ್ಷಗಳಲ್ಲಿ ಮಹಾವಿದ್ಯಾಲಯದ ಕ್ರೀಡಾ ವಿಭಾಗದಿಂದ ಅಥ್ಲೆಟಿಕ್ಸ್ ಹಾಗೂ ವಿವಿಧ ಕ್ರೀಡೆಗಳಲ್ಲಿ ಐದು ವರ್ಷಗಳಲ್ಲಿ ಹದಿನೈದು ವಿವಿ ಬ್ಲೂ ಪ್ರಶಸ್ತಿ ಪಡೆದ ಸ್ವರಾಂಜಲಿ ಜಾಧವ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಬಿ.ಎ.ಪದವಿಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ ಆಯ್ಕೆಯಾದ ತೇಜಸ ಫಡಕೆ ಹಾಗೂ ಕುಲಸುಮ ಧಾಖಣಿ, ಬಿ.ಕಾಂ. ಪದವಿಯಲ್ಲಿ ಬಸನಗೌಡ ಪಾಟೀಲ ಅನುಜಾ ಬಾದರೆ ಅವರನ್ನು ಸತ್ಕರಿಸಲಾಯಿತು. ದೈಹಿಕ ನಿರ್ದೇಶಕ ಡಾ.ಸಿ.ರಾಮಾರಾವ್, ಡಾ.ಸಿ.ಮಲ್ಲಣ್ಣ, ಡಾ.ಎಚ್.ಎಂ.ಚನ್ನಪ್ಪಗೋಳ, ಡಾ.ಮಹೇಶ ಗುರನಗೌಡರ, ಪ್ರೊ.ವಿನಾಯಕ ವರುಟೆ, ಡಾ.ಶಶಿಕಾಂತ ಕೊಣ್ಣೂರ, ಪ್ರೊ.ಸಾರಿಕಾ ನಗರೆ ಇತರರಿದ್ದರು.