

ಅಳಗವಾಡಿ: ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಎದುರಿಸಿದರೆ ಉತ್ತಮ ಲಿತಾಂಶ ಪಡೆಯಲು ಸಾಧ್ಯ ಎಂದು ಸಾಹಿತಿ ಡಾ.ರತ್ನಾ ಬಾಳಪ್ಪನವರ ಹೇಳಿದರು.
ಸಮೀಪದ ಬಸ್ತವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಉಳಿಯ ಪೆಟ್ಟು ತಾಳಲಾರದ ಕಲ್ಲು ಮೆಟ್ಟಿಲಾದರೆ, ಉಳಿ ಪೆಟ್ಟು ತಿಂದ ಕಲ್ಲು ಮೂರ್ತಿಯಾಗಿ ಪೂಜೆಗೆ ಅರ್ಹವಾಯಿತು. ಅದೇ ರೀತಿ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.
ಶಿಕ್ಷಕ ಎಸ್.ಎಸ್.ಸಂಕ್ರಟ್ಟಿ ಮಾತನಾಡಿ, ನಮ್ಮ ಶಾಲೆಯು ಹಲವಾರು ಕೊರತೆ ನಡುವೆಯೂ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‌್ಯಾಂಕ್ ಪಡೆದುಕೊಂಡಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುಖದೇವ ಕಾಂಬಳೆ, ಗಿರೀಶ ಕಾಂಬಳೆ, ಅಮರ ಬಾಬಣ್ಣವರ, ಮಂಗಲ ಕಾಂಬಳೆ ಇತರರಿದ್ದರು. ದೀಪಾ ಹೊಸಮನಿ ಸ್ವಾಗತಿಸಿದರು. ಶಾಂಭವಿ ಹೊಳ್ಕರ ನಿರೂಪಿಸಿದರು. ಶಾಂತಾ ಪಾಟೀಲ ವಂದಿಸಿದರು.