

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಿಗದಿಯಾಗಿದ್ದ ದ್ವೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮೂರೂ ಪಕ್ಷಗಳ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಜೆಡಿಎಸ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಿಸಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಯಾರೊಬ್ಬರೂ ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಖರ್ಗೆ, ಕಡಾಡಿ, ಗಸ್ತಿ ಸ್ವತಃ ಬಂದು ಆಯ್ಕೆಯ ಪ್ರಮಾಣ ಪತ್ರ ಪಡೆದರೆ, ದೇವೇಗೌಡರ ಪರವಾಗಿ ಅವರ ಪ್ರತಿನಿಧಿ ಪ್ರಮಾಣ ಪತ್ರ ಪಡೆದುಕೊಂಡರು.