ದೇವರ ಅನುಗ್ರಹದೊಂದಿಗೆ ಪ್ರಯತ್ನ, ಶ್ರದ್ಧೆಯೂ ಇರಲಿ

SVR PRAVACHAN
Published on

ಸವಣೂರ: ಭಗವಂತನ ಅನುಗ್ರಹದೊಂದಿಗೆ ನಿರಂತರವಾದ ಪ್ರಯತ್ನ, ಆತ್ಮವಿಶ್ವಾಸ, ಶ್ರದ್ಧೆ ಇದ್ದಲ್ಲಿ ಯಾವುದೇ ಮಹತ್ಕಾರ್ಯವನ್ನು ಸಾಧಿಸಬಹುದು ಎಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಸುದರ್ಶನ ಆಚಾರ್ಯ ಆದ್ಯ ಹೇಳಿದರು.

ಶ್ರವಣ ಯಜ್ಞದ ಅಂಗವಾಗಿ ಪಟ್ಟಣದ ಶ್ರೀ ಸತ್ಯಬೋಧ ಸ್ವಾಮೀಜಿ ಮೂಲ ವೃಂದಾವನ ಸನ್ನಿಧಾನದಲ್ಲಿ ಗುರುವಾರ ಏರ್ಪಡಿಸಿದ್ದ ಭಾಗವತ ಪ್ರವಚನದಡಿ, ಒಂಬತ್ತನೇ ಸ್ಕಂದದ ವಿವರಣೆ ನೀಡಿದರು. ‘ರಾಜ ಭಗೀರಥನ ಮಹಾ ಪ್ರಯತ್ನದಿಂದ ಗಂಗೆ ಧರೆಗಿಳಿದ ಪ್ರಸಂಗ ಹಾಗೂ ಅತ್ಯಂತ ಮೃದುವಾದ ಸಜ್ಜನರ ಮನಸಿನ ವಿಶಾಲತೆಯನ್ನು ವಿವರಿಸಿ, ಪ್ರತಿಯೊಂದು ಜೀವಿಗಳ ಎಲ್ಲಾ ಕಷ್ಟಗಳು ತನಗೆ ಇರಲಿ ಎಂದು ಪ್ರಾರ್ಥಿಸಿದ ರಾಜಾ ರಂತಿದೇವನ ಆದರ್ಶಗಳನ್ನು ತಿಳಿಸಿದರು.

ದೇವರಲ್ಲಿ ನಮ್ಮ ಭಕ್ತಿಯ ಜಾಗೃತಿಗಾಗಿ ಸತ್ಕಥಾಶ್ರವಣ ಅವಶ್ಯ. ಭಾಗವತದ ಪ್ರತಿಯೊಂದು ಪದಗಳಲ್ಲಿಯೂ ಸ್ವಾರಸ್ಯವಿದೆ. ವೇದ ಮಂತ್ರಗಳ ಅರ್ಥವನ್ನು ಅರಿಯುವುದೇ ನಿಜವಾದ ಜ್ಞಾನ, ಜೀವನದ ಪರಿಪೂರ್ಣತೆ ಎಂದರು.

ಚವನ ಮಹರ್ಷಿಗಳ ತಪಶಕ್ತಿ, ನಾಭಾಗನ ಪ್ರಾಮಾಣಿಕತೆ, ಅಂಬರೀಶ ಮಹಾರಾಜರ ಧರ್ಮ ಶ್ರದ್ಧೆ, ಮಾಂಧಾತ ಮಹಾರಾಜನ ವೈಭವ, ಸೌಭರಿ ಮಹರ್ಷಿಗಳ ವೃತ್ತಾಂತ, ಸತ್ಯ ಹರಿಶ್ಚಂದ್ರನ ಕಥಾ ಹಂದರಗಳನ್ನು ವಿವರಿಸಿದರು.

ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಅವಿನಾಶ ಆಚಾರ್ಯ ಹಾಗೂ ಅಭಿಷೇಕ ಆಚಾರ್ಯ ನೇತೃತ್ವ ವಹಿಸಿದ್ದರು.

ಅರ್ಚಕರಾದ ರಂಗಾಚಾರ್ಯ ರಾಯಚೂರು, ಪ್ರವೀಣಆಚಾರ್ಯ ಆಯಿ, ಪ್ರವೀಣ ಕುಲಕರ್ಣಿ, ಪಾಂಡುರಂಗ ರಿತ್ತಿ ಹಾಗೂ ಇತರರು ಪಾಲ್ಗೊಂಡಿದ್ದರು. ಹಸ್ತೋದಕ, ತೀರ್ಥ ಪ್ರಸಾದ ವಿತರಣೆ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net