

ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದಿಂದ ಬೆಳಗಾವಿ ಮಹಾಂತೇಶ ನಗರದ ಗ್ಲಾಸ್‌ಹೌಸ್ ಮೈದಾನದಲ್ಲಿ ಶನಿವಾರ ಗಡಿನಾಡು ರಾಜ್ಯೋತ್ಸವ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳಾಗಿ ಆಗಮಿಸಿದ್ದ ಚಿತ್ರನಟ ವಶಿಷ್ಠ ಸಿಂಹ, ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಟ್ ಸಂಸ್ಥೆ ನಿರ್ದೇಶಕಿ ನಿವೇದಿತಾ ಸಿದ್ನಾಳ, ಉದ್ಯಮಿ ಶಿವು ನಂದಗಾಂವ ಉದ್ಘಾಟಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್, ಪಾಲಿಕೆ ಸದಸ್ಯ ರಾಜಶೇಖರ ಡೋಣಿ, ಕರವೇ ಉತ್ತರ ಕರ್ನಾಟಕ ಶರಣು ಗದ್ದುಗೆ, ಕರವೇ ರಾಜ್ಯಕಾರ್ಯದರ್ಶಿ ರವಿ ಪೂಜಾರಿ, ಡಾ. ಗಿರೀಶ್ ಸೋನವಾಲ್ಕರ್ ಇತರರಿದ್ದರು.
ಕಿಂಗ್ ಐಸ್‌ಕ್ರೀಮ್ ಹಾಗೂ ಬಿರ್ಲಾ ಸ್ಕೂಲ್ ಪ್ರಾಯೋಜಕತ್ವ ವಹಿಸಿದ್ದರು. ಬೆಳಗ್ಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳು ನಡೆದವು.
ಚಿತ್ರನಟ ವಸಿಷ್ಠ ಸಿಂಹ ಮಾತನಾಡಿ, ಬೆಳಗಾವಿ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು ಮನಸಿಗೆ ನೋವುಂಟು ಮಾಡುತ್ತಿವೆ. ಕನ್ನಡಿಗರು ಸಹನೆ ಪರೀಕ್ಷೆ ಮಾಡಬಾರದು. ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ ಎಂದರು. ಕರವೇ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಮಾತನಾಡಿದರು.