

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ಇದರ ಬೆನ್ನಲ್ಲೇ ಕ್ಷಯರೋಗ ಭೀತಿ ಶುರುವಾಗಿದೆ. ಜಿಲ್ಲೆಯಲ್ಲಿ 38 ಜನರಲ್ಲಿ ಕ್ಷಯರೋಗ ಪತ್ತೆಯಾಗಿದ್ದು, ಈ ಕಾಯಿಲೆಗೆ ತುತ್ತಾದವರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೈಲಹೊಂಗಲ ತಾಲೂಕಿನಲ್ಲಿ 12, ಅಥಣಿ 9, ಗೋಕಾಕ 8, ಹುಕ್ಕೇರಿ, ರಾಯಬಾಗ, ಕಾಗವಾಡ, ಬೆಳಗಾವಿ ನಗರದಲ್ಲಿ ತಲಾ 2 ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಸಕ್ರಿಯ ಕ್ಷಯ ರೋಗ ಪ್ರಕರಣಗಳ ಪತ್ತೆಗೆ ಜಿಲ್ಲಾ ಆರೋಗ್ಯ ಇಲಾಖೆ ಆಂದೋಲನ ಹಮ್ಮಿಕೊಂಡಿದೆ.
ಕ ಸಂಗ್ರಹ: ಆಂದೋಲನದ ಮೂಲಕ 2,042 ಶಂಕಿತರನ್ನು ಗುರುತಿಸಲಾಗಿದ್ದು, ಈ ಪೈಕಿ ಅಥಣಿ ತಾಲೂಕೊಂದರಲ್ಲೇ 368 ಶಂಕಿತರನ್ನು ಗುರುತಿಸಲಾಗಿದೆ. ಕಾಗವಾಡ 23, ಬೈಲಹೊಂಗಲ 232, ಬೆಳಗಾವಿ ನಗರ 227, ಬೆಳಗಾವಿ ಗ್ರಾಮೀಣ 75, ಚಿಕ್ಕೋಡಿ 30, ಗೋಕಾಕ 377, ಮೂಡಲಗಿ 72, ಹುಕ್ಕೇರಿ 485, ಖಾನಾಪುರ 33, ರಾಯಬಾಗ 37 ಹಾಗೂ ರಾಮದುರ್ಗದಲ್ಲಿ 83 ಕ್ಷಯರೋಗ ಶಂಕಿತರನ್ನು ಗುರುತಿಸಲಾಗಿದೆ. ಇವರ ಕವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
1,045 ಪ್ರದೇಶಗಳ ಆಯ್ಕೆ: ಡಿ. 1ರಿಂದ 12ರ ವರೆಗೆ ಕ್ಷಯ ರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ 53,55,295 ಜನಸಂಖ್ಯೆ ವ್ಯಾಪ್ತಿಯಲ್ಲಿ 1,045 ಪ್ರದೇಶಗಳನ್ನು ಆಯ್ಕೆ ಮಾಡಿ, ಅಲ್ಲಿ ತಪಾಸಣೆ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 4,54,805 ಜನರ ತಪಾಸಣೆ ಮಾಡಲಾಗಿದೆ. ಈ ಪೈಕಿ 11,710 ಜನರಿಗೆ ಸಕ್ಕರೆ ಕಾಯಿಲೆ ಇದೆ. 178 ಕ್ಷಯ ರೋಗಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ತೆ ಕಾರ್ಯ ಎಲ್ಲೆಲ್ಲಿ?: ಅಥಣಿ ತಾಲೂಕಿನ 91 ಪ್ರದೇಶಗಳಲ್ಲಿ ಕ್ಷಯರೋಗ ಪತ್ತೆ ಹಚ್ಚಲಾಗಿದೆ. ಅದೇ ರೀತಿ, ಕಾಗವಾಡ 36, ಚಿಕ್ಕೋಡಿ 65, ನಿಪ್ಪಾಣಿ 41, ಗೋಕಾಕ 87, ಮೂಡಲಗಿ 42, ಹುಕ್ಕೇರಿ 99, ರಾಯಬಾಗ 82,ಬೈಲಹೊಂಗಲ 58, ಕಿತ್ತೂರು 68, ಬೆಳಗಾವಿ ನಗರ 85, ಬೆಳಗಾವಿ ಗ್ರಾಮೀಣ 68, ಖಾನಾಪುರ 39, ಸವದತ್ತಿ 137, ರಾಮದುರ್ಗ ತಾಲೂಕಿನ 47 ಪ್ರದೇಶಗಳಲ್ಲಿ ಕ್ಷಯ ರೋಗ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಅನಿಲ ಕೊರಬು ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 11,13,398 ಜನರ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಗುರಿ ಹಾಕಿಕೊಂಡಿದೆ. ಈಗಾಗಲೇ ಶೇ. 41ರಷ್ಟು ಕಾರ್ಯ ಪೂರ್ಣಗೊಂಡಿದೆ. 3,117 ಸಿಬ್ಬಂದಿ ಒಳಗೊಂಡ 1,566 ತಂಡ ರಚಿಸಲಾಗಿದೆ. ಇದರಲ್ಲಿ 3,164 ಜನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಂದೋಲನದ ಭಾಗವಾಗಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಸ್ವಯಂ ಸೇವಕರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರತಿ ಕ್ಷಯ ರೋಗಿಗೆ ಚಿಕಿತ್ಸಾ ಅವಧಿಯಲ್ಲಿ ಪೌಷ್ಟಿಕ ಆಹಾರಕ್ಕೆ ಮಾಸಿಕ 500 ರೂ., ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 1 ಸಾವಿರ ರೂ. ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರೊನಾ ಸೋಂಕು ತಗುಲಿದವರಿಗೆ ಕ್ಷಯ ರೋಗ ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿಗೊಳಗಾಗಿ ಗುಣಮುಖರಾದವರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಗೆ ಬಂದು ಕ್ಷಯ ರೋಗ ತಪಾಸಣೆ ಮಾಡಿಸಿಕೊಳ್ಳಬೇಕು. | ಡಾ. ಅನಿಲ ಕೊರಬು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ, ಬೆಳಗಾವಿ
| ಜಗದೀಶ ಹೊಂಬಳಿ, ಬೆಳಗಾವಿ