

ಹೊಸಪೇಟೆ: ಜಿ-20 ಶೃಂಗಸಭೆಗೆ ಒದಗಿಸಬೇಕಾದ ಅಗತ್ಯ ಸೌಲಭ್ಯಗಳಿಗೆ ಬೇಕಿರುವ ಅನುದಾನಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಟಿ.ವೆಂಕಟೇಶ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬುಧವಾರ ಮಾತನಾಡಿದರು. ಕೇಂದ್ರ ಸರ್ಕಾರ ಶೃಂಗಸಭೆಯ ಅಗತ್ಯ ಜವಾಬ್ದಾರಿ ವಹಿಸಿಕೊಳ್ಳಲಿದೆ. ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಕ್ರಮಕೈಗೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದ ಸಭೆ ಆಗಿರುವುದರಿಂದ ಸ್ವಚ್ಛತೆ, ರಸ್ತೆ, ಮೂಲಸೌಕರ್ಯ ಒದಗಿಸಲು ಸ್ಥಳೀಯ ಸಂಸ್ಥೆ, ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣ ಸಮಿತಿ (ಹವಾಮಾ) ಹಾಗೂ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಹಂಪಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಸ್ಥಳೀಯ ರಸ್ತೆಗಳ ದುರಸ್ತಿ ಕೈಗೊಳ್ಳಬೇಕು. ಶೃಂಗಸಭೆಗೆ ಸೀಮಿತಗೊಳಿಸದೆ ಪ್ರವಾಸಿಗರಿಗೂ ಅನುಕೂಲವಾಗುವಂತಹ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು. ಹಂಪಿ, ಕಮಲಾಪುರ ಹಾಗೂ ಹೊಸಪೇಟೆ ನಗರದಲ್ಲಿ ಮುಖ್ಯವಾಗಿ ರೈಲು ನಿಲ್ದಾಣ ಸೇರಿ ಇತರ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಲು ಸೂಚಿಸಿದರು.
ಅಗತ್ಯ ಸೌಕರ್ಯಗಳ ನಿರ್ವಹಣೆಗೆ ಆಯಾ ಇಲಾಖೆಗಳ ಗ್ರೇಡ್-1 ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುವುದು. ಹಂಪಿಯ ವಿವಿಧೆಡೆ ಕುಡಿವ ನೀರಿನ ಘಟಕಗಳನ್ನು ನಿರ್ಮಿಸಬೇಕು. ಐತಿಹಾಸಿಕ ಸ್ಮಾರಕಗಳಿಗೆ ಯಾವುದೇ ಧಕ್ಕೆಯಾಗದಂತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು. ನಿಯೋಜಿಸಲ್ಪಟ್ಟ ಇಲಾಖೆಗಳು ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮನ್ವಯ ಕೈಗೊಂಡು ಸೌಕರ್ಯ, ಸಿದ್ಧತೆಗಳ ಮಾಹಿತಿ ಒದಗಿಸಬೇಕು. ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.