ವೃತ್ತಿ ಮಾರ್ಗದರ್ಶನದಿಂದ ಭವಿಷ್ಯ ಉಜ್ವಲ

26Athni2
Published on

ಅಥಣಿ: ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನದ ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಪಟ್ಟಣದ ಸಿನ್ನಾಳ-ತಂಗಡಿ ರಸ್ತೆಯಲ್ಲಿರುವ ಎ.ಎಸ್.ಪಾಂಗಿ ವೈದ್ಯಕೀಯ ಸೇವೆಗಳು ಮತ್ತು ಸಂಶೋಧನಾ ಪ್ರತಿಷ್ಠಾನ, ಅನ್ನಪೂರ್ಣಾ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಕ್ಲಬ್, ಇನ್ನರವ್ಹೀಲ್ ಕ್ಲಬ್ ಸಹಯೋಗದಲ್ಲಿ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಡಾ.ಪಾಂಗಿ ಅವರು ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಕೊಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರವಿ ಪಾಂಗಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಬೇಕು. ಪಿಯುಸಿ ನಂತರದ ಹೆಜ್ಜೆ ಬದುಕಿನ ಪ್ರಮುಖ ಘಟ್ಟವಾಗಿದ್ದು, ಕಾರ್ಯಾಗಾರದ ಸದ್ಬಳಕೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ತೇರಣಿಮಠ, ಡಾ.ವಿದ್ಯಾ ಸ್ವಾಮಿ, ಡಾ.ಪ್ರಕಾಶ ಕುಂದರಗಿ ಮಾತನಾಡಿ, ವಿದ್ಯಾರ್ಥಿಗಳು ಸಮಯ, ಹಣ ವ್ಯರ್ಥಮಾಡದೇ, ಉನ್ನತ ಶಿಕ್ಷಣ ಪಡೆದು ಸಮಾಜಮುಖಿ ಸೇವೆಗೆ ಅಣಿಯಾಗಬೇಕು. ಸಾಧನೆಗೆ ಸತತ ಅಧ್ಯಯನ, ಪರಿಶ್ರಮ ಇರಬೇಕು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಪೂರ್ಣಿಮಾ ಪಾಂಗಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಪ್ಪ ಪಾಂಗಿ, ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ, ತೃಪ್ತಿ ಕುಲಕರ್ಣಿ, ಪ್ರಾಚಾರ್ಯ ಪರಮಾನಂದ ನಾಯಿಕ, ಡಾ.ಕುಮಾರ ತಳವಾರ, ರೋಟರಿ ಸದಸ್ಯರಾದ ಡಾ.ಪಿ.ಪಿ.ಮಿರಜ, ಅರುಣ ಯಲಗುದ್ರಿ, ಶೇಖರ ಕೋಲಾರ, ಮೇಘರಾಜ ಪರಮಾರ, ಸಂತೋಷ ಬೊಮ್ಮನ್ನವರ, ಅನಿಲ ದೇಶಪಾಂಡೆ, ಲಕ್ಷಣ ಬಣಜವಾಡ, ಡಿ.ಡಿ.ಮೆಕನಮರಡಿ, ಸೋಮು ವಾಂಗಿ, ಬಾಳಪ್ಪ ಬುಕಿಟಗಾರ, ಮೋಹನ ಕಾಂಬಳೆ, ಸಿದ್ದು ಸಂಕ್ರಟ್ಟಿ, ಪ್ರಫುಲ್ ಪಡನಾಡ, ಅಮೃತ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net