ಜಾಗೃತಿಯಿಂದ ಮಾಹಿತಿ ದಾಖಲಿಸಿ

13 HRP 02
ಹರಪನಹಳ್ಳಿ ಪ್ರವಾಸಿ ಮಂದಿರ ಸಭಾಂಗಣದಲ್ಲಿ ತಾಲೂಕು ಮಾದಿಗ ಮಹಾಸಭಾವತಿಯಿಂದ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆ ನಡೆಯಿತು. ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಹಂಚಿನಮನೆ ಕೆಂಚಪ್ಪ, ಪುರಸಭೆ ಉಪಾಧ್ಯಕ್ಷ ಎಚ್ ಕೊಟ್ರೇಶ್, ಗೋಣಿಬಸಪ್ಪ, ರಮೇಶ, ಬಸವರಾಜ, ದುರುಗೇಶ, ಮಾಳಗಿ ಜುಂಜಪ್ಪ, ಕೆ ಸುಭಾಷ್, ಹುಚ್ಚಪ್ಪ, ಫಕ್ಕಿರಪ್ಪ, ಓ ಮಹಾಂತೇಶ, ಮಜ್ಜೀಗೆರೆ ಭೀಮಪ್ಪ, ಕೆ ಗುರುಮೂರ್ತಿ, ಯರಬಾಳು ನಾಗಣ್ಣ, ಚನ್ನಬಸಪ್ಪ ಇತರರಿದ್ದರು.
Published on

ಹರಪನಹಳ್ಳಿ: ಜಾತಿವಾರು ಜನಗಣತಿ ಆರಂಭವಾಗಲಿದ್ದು, ಸಮಾಜದವರು ಜಾತಿ ಕಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು ಎಂದು ವಕೀಲ ಹಲಗೇರಿ ಮಂಜಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಭಾನುವಾರ ತಾಲೂಕು ಮಾದಿಗ ಮಹಾಸಭಾವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಿರಂತರ 75 ವರ್ಷಗಳ ಒಳಮೀಸಲಾತಿ ಹೋರಾಟವು ಈಗ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಸರ್ಕಾರ ನಡೆಸುತ್ತಿರುವ ಜಾತಿ ಸಮಿಕ್ಷೆಯಲ್ಲಿ ಸಮುದಾಯದವರು ಜಾಗೃತಿಯಿಂದ ಮಾಹಿತಿ ದಾಖಲಿಸಬೇಕು. ಆ.1ರಂದು ಸುಪ್ರಿಂ ಕೋರ್ಟ್ ನೀಡಿದ ತೀರ್ಪಿನಿಂದ ನಮಗೆಲ್ಲ ಮರುಜೀವ ಬಂದಂತಾಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಬದ್ಧವಾಗಿದೆ. ನಿಖರ ಅಂಕಿ-ಅಂಶಗಳಿಗಾಗಿ ದತ್ತಾಂಶ ಸಂಗ್ರಹಿಸಲು ಜಾತಿ ಸಮೀಕ್ಷೆ ನಡೆಸುತ್ತಿದೆ ಎಂದರು.

ಸಮುದಾಯದ ಹಟ್ಟಿ, ಕೇರಿ, ಮನೆಗಳಿಗೆ ಸಮೀಕ್ಷೆ ನಡೆಸಲು ಬಂದಾಗ ನಾವು ಯಾವುದೇ ಅಂಜಿಕೆ ಇಲ್ಲದೆ ಮಾದಿಗ ಎಂದು ನಮೂದಿಸುವ ಮೂಲಕ ಎಕೆ, ಎಡಿ, ಹರಿಜನ ಮುಂತಾದ ಗೊಂದಲಗಳಿಗೆ ಅಂತ್ಯ ಹಾಡಬೇಕಿದೆ ಎಂದು ತಿಳಿಸಿದರು.

ತಾ.ಪಂ ಮಾಜಿ ಸದಸ್ಯ ಮೈದೂರು ಓ ರಾಮಣ್ಣ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಮಾಜಕ್ಕೆ ಸಮರ್ಪಕವಾಗಿ ಸಿಗುತ್ತಿಲ್ಲ. ನಾವೆಲ್ಲರೂ ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟ ಮಾಡಬೇಕಾಗಿದ್ದು ಸಮುದಾಯದ ಉಳಿವು ನಮ್ಮೆಲ್ಲರ ಗುರಿಯಾಗಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಕ್ರಾಂತಿಕಾರಿ ಒಳ ಮೀಸಲಾತಿ ಹೋರಾಟದ ಅಧ್ಯಕ್ಷ ಬಿಆರ್ ಭಾಸ್ಕರ್ ಪ್ರಸಾದ್ ಅವರ ತಂಡಕ್ಕೆ ಕೊಲೆ ಬೆದರಿಕೆ ಹಾಗೂ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸುವಂತಹ ಕುತಂತ್ರ ನಡೆಸುತ್ತಿರುವವರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಮಾದಿಗ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net