

ಬೆಳಗಾವಿ: ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯ ಆಕಾಂಕ್ಷಿಗಳೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ 1,300 ಹುದ್ದೆಗಳ ನೇಮಕದ ಅಂತಿಮ ಆಯ್ಕೆ ಪಟ್ಟಿ ಸಿದ್ಧವಿದ್ದರೂ ಪ್ರಕಟಿಸದೆ ಕಾಲಹರಣ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿ ಅವರು ಒಂದು ವಾರದಲ್ಲಿ ಆಯ್ಕೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು 1 ತಿಂಗಳಿಂದ ಹೇಳುತ್ತಲೇ ಬಂದಿದ್ದಾರೆ ಹೊರತು ಪ್ರಕಟಿಸುತ್ತಿಲ್ಲ. ಇತ್ತ ಹೊಣೆಗಾರಿಕೆ ಹೊತ್ತಿರುವ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜ ಎ.ಎಂ., ಜಿಲ್ಲಾಧಿಕಾರಿ ಬಳಿಗೆ ಅಂತಿಮ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಿ, ಬಿಡುಗಡೆ ಮಾಡುವುದಕ್ಕೆ ದಿನಾಂಕ ನಿಗದಿ ಮಾಡು ತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳು ಅಂತಿಮ ಪಟ್ಟಿಯಲ್ಲಿದ್ದರೂ ವರ್ಷಗಟ್ಟಲೇ ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.
ಜಗಳವೂ ಕಾರಣ: ಬೆಳಗಾವಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕುರ್ಚಿಗಾಗಿ ಕಿತ್ತಾಟ ನಡೆಸಿದ್ದೂ ಅಂತಿಮ ಪಟ್ಟಿ ಬಿಡುಗಡೆ ಆಗದಿರುವುದಕ್ಕೆ ಕಾರಣವಾಗಿದೆ. ಬಸವರಾಜ ಎ.ಎಂ. ಅವರು ಇಲಾಖೆಯ ಸಿಬ್ಬಂದಿ ದೂರಿನ ಹಿನ್ನೆಲೆಯಲ್ಲಿ ಬೇರೆಡೆ ವರ್ಗವಾಗಿದ್ದರು. ಅವರ ಸ್ಥಾನಕ್ಕೆ ನಾಗರಾಜ ಎಂ. ಅವರು ಡಿಡಿ (ಡೆಪ್ಯೂಟಿ ಡೈರೆಕ್ಟರ್) ಆಗಿ ಬಂದಿದ್ದರು. ಬಸವರಾಜ ಎ.ಎಂ. ಅವರು, ಮತ್ತೆ ಕೆಎಟಿಯಿಂದ ಆದೇಶ ತಂದು ಬೆಳಗಾವಿಗೆ ಬಂದರು. ಹೀಗೆ ಈ ಇಬ್ಬರೂ ಅಧಿಕಾರಿಗಳು ಕುರ್ಚಿಗಾಗಿ ಕಿತ್ತಾಟ ನಡೆಸಿ, ತಮ್ಮ ಜವಾಬ್ದಾರಿಯನ್ನೇ ಮರೆತರು. ಈಗ ಬಸವರಾಜ ಎ.ಎಂ. ಅವರು ಡಿಡಿಯಾಗಿ ಮುಂದುವರಿದಿದ್ದರೂ ನೇಮಕದ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳ ಪಾಡು ಹೇಳತೀರದ್ದಾಗಿದೆ.
2022ರ ಜೂನ್‌ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 1000 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ನೇಮಕಾತಿ ಪೂರ್ಣಗೊಂಡು, ಆಯ್ಕೆ ಪಟ್ಟಿ ಅಂತಿಮ ಹಂತದಲ್ಲಿತ್ತು. ಆಗ ಸರ್ಕಾರದ ಹೊಸ ಮಾರ್ಗಸೂಚಿ ಬಂದಿದೆ ಎಂಬ ಕಾರಣವೊಡ್ಡಿ ಪ್ರಕ್ರಿಯೆ ಕೈಬಿಟ್ಟರು. 2023ರ ಜೂನ್‌ನಲ್ಲಿ ಮತ್ತೆ ಆ್ಲೈನ್ ಮೂಲಕ ಅರ್ಜಿ ಕರೆದು ಆಯ್ಕೆ ಪ್ರಕ್ರಿಯೆ ನಡೆಸಿದೆ. ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಆಯ್ಕೆಪಟ್ಟಿಯೂ ತಯಾರಾಗಿದೆ. ಜಿಲ್ಲಾಧಿಕಾರಿ ಅವರು ಅಧ್ಯಕ್ಷರಿರುವ ಜಿಲ್ಲಾ ಆಯ್ಕೆ ಸಮಿತಿಗೆ ಇಲಾಖೆ ಉಪನಿರ್ದೇಶಕರು ವರದಿ ಒಪ್ಪಿಸುವುದು ಬಾಕಿ ಇದೆ. ಆದರೆ, ವರದಿ ಒಪ್ಪಿಸುತ್ತಿಲ್ಲ. ಹೀಗಾಗಿ ಆಕಾಂಕ್ಷಿಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸದ್ಯ ಇಲಾಖೆಯ ಡಿಡಿ ಬಸವರಾಜ ಎ.ಎಂ. ಅವರನ್ನು ಆಯ್ಕೆ ಪಟ್ಟಿ ಬಿಡುಗಡೆ ಮಾಡದಿರುವ ಬಗ್ಗೆ ಕಾರಣ ತಿಳಿಯಲು ವಿಜಯವಾಣಿಯಿಂದ ಕರೆ ಮಾಡುತ್ತಿದ್ದರೂ ಸ್ವೀಕರಿಸದೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳ ಮಧ್ಯೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬಡಪಾಯಿ ಜನರ ಮೇಲೆ ತೋರಿಸುವುದೇಕೆ? ಅಧಿಕಾರಿಗಳು ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದಾದರೂ ಏಕೆ? ಇಂತಹ ಅಧಿಕಾರಿಗಳನ್ನು ಮೇಲಧಿಕಾರಿಗಳು ಏನೂ ಕೇಳುವುದಿಲ್ಲವೇ ? ಈ ನೇಮಕದಲ್ಲಿ ನಡೆಯುತ್ತಿರುವುದಾದರೂ ಏನು ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಗಿದಿದೆ. ಕಾರಣಾಂತರಗಳಿಂದ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡುವುದಕ್ಕೆ ಸ್ವಲ್ಪ ವಿಳಂಬವಾಗಿದೆ. ಒಂದು ವಾರದಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡುತ್ತೇವೆ.| ನಿತೇಶ ಪಾಟೀಲ, ಜಿಲ್ಲಾಧಿಕಾರಿ ಬೆಳಗಾವಿ