

ಕೂಡ್ಲಿಗಿ: ಕೂಲಿ ಕಾರ್ಮಿಕರು, ವೃದ್ಧಾಪ್ಯ ವೇತನ ಪಡೆಯುವರ ಮನೆೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಅಂಚೆ ನೌಕರರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ವಿ. ಎಲ್. ಚಿತ್ತಕೋಟೆ ಹೇಳಿದರು.
ತಾಲೂಕಿನ ಚೌಡಾಪುರ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಪ್ರತಿ ಹಳ್ಳಿಗೂ ಸಣ್ಣ ಮಟ್ಟದ ಬ್ಯಾಂಕ್ ಆಗಿ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕಾರ್ಡ್ ಮೂಲಕ ಬ್ಯಾಂಕಿನ ಎಲ್ಲ ಸೌಲಭ್ಯ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡಿದ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಟಿ. ನವೀನ್ ಕುಮಾರ್ ಮಾತನಾಡಿ, ಅಂಚೆ ಇಲಾಖೆ ದೇಶದ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿದೆ. ಅಲ್ಲದೆ ಒಂದೇ ಸೂರಿನಡಿ ಜನರಿಗೆ ಎಲ್ಲ ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಎ.ಎಂ.ಮಂಜುನಾಥ, ಉಪ ವಿಭಾಗದ ಅಂಚೆ ನಿರೀಕ್ಷಕ ಶಶಿಧರ್ ಹಿರೇಮಠ ಮಾತನಾಡಿದರು. ಅಂಚೆ ಸಹಾಯಕರಾದ ಎಲ್.ಎಸ್. ಸುರೇಶ್ ಕುಮಾರ್, ದುರುಗಪ್ಪ, ಕೂಡ್ಲಿಗಿ ಉಪ ವಿಭಾಗದ ಅಂಚೆ ಮೇಲ್ವಿಚಾರಕರಾದ ಗಂಗಣ್ಣ, ರವಿಕುಮಾರ್, ಅಂಚೆಪೇದೆ ಪರಸಪ್ಪ, ಅನುಷಾ, ಇದ್ದರು.