

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕ ಎಂಬುದು ದೇಶದ ಜನತೆಗೆ ಮನವರಿಕೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ನಗರದ ವಿದ್ಯಾರಣ್ಯಪುರಂ ಸುತ್ತಮುತ್ತ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರವಾಗಿ ಮತಯಾಚಿಸಿ ಮಾತನಾಡಿ, ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ವಿಶ್ವಮಟ್ಟದಲ್ಲಿ ಭಾರತವನ್ನು ವಿಶ್ವಗುರುನಾಗಿಸುವ ದೆಸೆಯಲ್ಲಿ ಪ್ರಧಾನಿ ಮೋದಿಯವರು ಕೈಗೊಂಡಿರುವ ರಾಜತಾಂತ್ರಿಕ ವಿಷಯಗಳಿಂದ ವಿಶ್ವದ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಪಡೆದಿದೆ ಎಂದರು.
ಮೋದಿಯವರ ಜನಪರ ಹಾಗೂ ಪಾರದರ್ಶಕ ಆಡಳಿತದ ಜತೆಗೆ ದೇಶದ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಕೋಟ್ಯಂತರ ಜನರ ಆಶಯವಾಗಿದ್ದ ರಾಮ ಮಂದಿರ ನಿರ್ಮಾಣ ಸೇರಿ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು
ಎಸಿ ಮೋರ್ಚಾ ಅಧ್ಯಕ್ಷ ವಿ.ಶೈಲೇಂದ್ರ, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ರಮೇಶ್, ಜಗದೀಶ್, ಪಕ್ಷದ ಪ್ರಮುಖರಾದ ಗೋಪಾಲ್ ರಾಜ್ ಅರಸ್, ಜೆ. ರವಿ, ಜಯರಾಮ್, ಜಗದೀಶ್, ಸಂದೀಪ್, ಧರ್ಮೇಂದ್ರ, ಶಿವಲಿಂಗ ಸ್ವಾಮಿ ಹಾಗೂ ಇತರರು ಇದ್ದರು