ಬಿಳಿ ಆನೆಯಾದ ಬೆಳಗಾವಿ ಅಧಿವೇಶನ!: 9 ಅಧಿವೇಶನಕ್ಕಾಗಿ 100 ಕೋಟಿ ರೂ. ಖರ್ಚು; ದಿನಕ್ಕೆ 1.23 ಕೋಟಿ ರೂ. ವೆಚ್ಚ

Suvarna Soudha 2
Published on

| ರಾಯಣ್ಣ ಆರ್.ಸಿ. ಬೆಳಗಾವಿ

ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿಂದ ನೋಡಲ್ಪಡುವ ಬೆಳಗಾವಿಯ ಚಳಿಗಾಲ ಅಧಿವೇಶನ ವರ್ಷದಿಂದ ವರ್ಷಕ್ಕೆ ಮಹತ್ವ ಪಡೆದುಕೊಳ್ಳುತ್ತಲೇ ಇದೆ. ದಶಕಗಳಿಂದ ಹಾಗೆ ಉಳಿದಿರುವ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿವೇಶನವನ್ನು ಉತ್ತರ ಕರ್ನಾಟಕದವರು ಎಲ್ಲಿಲ್ಲದ ಆಶಾಭಾವದಿಂದ ನೋಡುತ್ತಾರೆ. ಆದರೆ, ಪ್ರತಿ ವರ್ಷ ಅಧಿವೇಶನ ನಡೆದರೂ ಉ.ಕ. ಭಾಗದ ಅಭಿವೃದ್ಧಿ ಊರ್ಧ್ವಮುಖಿಯಾಗುತ್ತಿಲ್ಲ. ಹೀಗಾಗಿ, ಚಳಿಗಾಲ ಅಧಿವೇಶನ ಎನ್ನುವುದು ಬಿಳಿ ಆನೆಯಾಗುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ, ಪ್ರಾದೇಶಿಕ ಅಸಮಾನತೆ ನಿವಾರಣೆ, ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ- ಹೀಗೆ ನೂರೆಂಟು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, 15 ವರ್ಷಗಳಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸುತ್ತ ಬಂದಿದೆ. ಇಲ್ಲಿವರೆಗೆ ಬೆಳಗಾವಿಯಲ್ಲಿ ನಡೆದ 9 ಅಧಿವೇಶನದ ಖರ್ಚಿಗಾಗಿ ಸರ್ಕಾರ ಅಂದಾಜು 100 ಕೋಟಿ ರೂ. (98.80 ಕೋಟಿ ರೂ.)ಗಳಿಗೂ ಅಧಿಕ ವೆಚ್ಚ ಮಾಡಿದೆ. ಆದರೆ, ಪ್ರಗತಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ನೆರೆ ಹಾವಳಿ, ಅತಿವೃಷ್ಟಿ, ಕರೊನಾ ಲಾಕ್​ಡೌನ್ ಚುನಾವಣೆ ಮುಂತಾದ ಕಾರಣಗಳಿಂದಾಗಿ 15 ವರ್ಷಗಳಲ್ಲಿ 6 ಬಾರಿ ಅಧಿವೇಶನ ನಡೆದಿಲ್ಲ. ಆದರೂ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಅಧಿವೇಶನಕ್ಕಾಗಿ ಮಾಡುತ್ತಿರುವ ಖರ್ಚು ದುಬಾರಿಯಾಗಿದೆ.

ಬೆಳಗಾವಿಯಲ್ಲಿಯೂ ಬೆಂಗಳೂರು ಮಾದರಿ ಅಧಿವೇಶನ ನಡೆಸಬೇಕು. ಪ್ರವಾಸಿ ಭತ್ಯೆ, ದಿನ ಭತ್ಯೆ ಮಾತ್ರ ನೀಡಿ, ಊಟೋಪಚಾರದ ಖರ್ಚು, ಆಯಾ ಖರ್ಚು ವೆಚ್ಚಗಳನ್ನು ಬೆಂಗಳೂರು ಮಾದರಿಯಲ್ಲಿಯೇ ನಿರ್ವಹಿಸುವ ಮೂಲಕ ವಿಧಾನಮಂಡಲ ಅಧಿವೇಶನ ನಡೆಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. 2006ರಿಂದ 2018ರವರೆಗೆ ನಡೆದ ಎಲ್ಲ 9 ಅಧಿವೇಶನಗಳು ಸೇರಿ 80 ದಿನ ಕಲಾಪ ನಡೆಸಲಾಗಿದೆ. ಸರಾಸರಿ ಲೆಕ್ಕ ಹಾಕಿದರೆ 1 ದಿನದ ಅಧಿವೇಶನಕ್ಕೆ 1.23 ಕೋಟಿ ರೂ. ವೆಚ್ಚವಾಗುತ್ತಿದೆ. ಬೆಳಗಾವಿಯಿಂದ 11 ಕಿ.ಮೀ. ಅಂತರದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ತೆರಳುವ ಶಾಸಕರಿಗೆ ದಿನಕ್ಕೆ 2500 ರೂ. ಭತ್ಯೆ ನೀಡಲಾಗುತ್ತಿದೆ. ಹುಬ್ಬಳ್ಳಿಯಿಂದ ಆಗಮಿಸುವ ಶಾಸಕರಿಗೆ, ಸಚಿವರಿಗೆ ದಿನಕ್ಕೆ 5,000 ರೂ. ಭತ್ಯೆ ನೀಡಲಾಗುತ್ತಿದೆ ಎಂದು ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಆದರೆ, ರಾಜ್ಯದೆಲ್ಲಡೆಯಿಂದ ಆಗಮಿಸುವ ಶಾಸಕರಿಗೆ, ತಮ್ಮ ಕ್ಷೇತ್ರದಿಂದ ಬೆಳಗಾವಿ ಅಧಿವೇಶನಕ್ಕೆ ಬರಲು ಪ್ರತಿ ಕಿ.ಮೀ.ಗೆ 25 ರೂ. ನೀಡಲಾಗುತ್ತಿದೆ. ಸರ್ವರಿಗೂ ಉಟೋಪಚಾರದ ವ್ಯವಸ್ಥೆ, ಪ್ರತಿಭಟನಾಕಾರರಿಗೆ ಹಾಕುವ ಪೆಂಡಾಲ್ ಸೇರಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net