

ಬೀದರ್ : ಕಳೆದ ನಾಲ್ಕೈದು ದಿನಗಳಿಂದ ಹೆಚ್ಚಾದ ಚಳಿಗೆ ಉತ್ತರದ ಮಲೆನಾಡು ಖ್ಯಾತಿಯ ಬೀದರ್ ಜಿಲ್ಲೆ ಗಡಗಡ ನಡುಗುತ್ತಿದೆ. ಡಿಸೆಂಬರ್ ಎರಡನೇ ವಾರದಿಂದ ಜನವರಿ ಮೊದಲ ವಾರದವರೆಗೆ ಜಿಲ್ಲೆಯಲ್ಲಿ ಚಳಿ ಜಾಸ್ತಿ ಇರುವುದು ಸಾಮಾನ್ಯ. ಆದರೆ ಪ್ರಸಕ್ತ ಡಿಸೆಂಬರ್ ಆರಂಭದಿಂದಲೇ ಚಳಿ ತೀವ್ರವಾಗಿ ಜನಸಾಮಾನ್ಯರಿಗೆ ಹೈರಾಣ ಮಾಡಿದ್ದು, ಚಳಿ ಚಳಿ ತಾಳೇನು ಈ ಚಳಿಯಾ ಎಂಬ ಹಾಡು ನೆನಪಿಗೆ ತರಿಸುತ್ತಿದೆ.
ನಿವಾರ್, ಬುರೆವಿ ಚಂಡಮಾರುತಗಳ ಪರಿಣಾಮದಿಂದಾದ ಏರಿಳಿತವು ಚಳಿಯ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಶನಿವಾರ, ಭಾನುವಾರ ರಾಜ್ಯದಲ್ಲೇ ಬೀದರ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದೆ. ತಾಪಮಾನ ಗಣನೀಯ ಕುಸಿತವಾಗಿ ಜನತೆ ಈಗಾಗಲೇ ನಡುಗುತ್ತಿರುವಾಗಲೇ ಬರುವ ದಿನಗಳಲ್ಲಿ ಅರ್ನಾಬ್ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ ಎಂಬ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಇನ್ನಷ್ಟು ಥಂಡಿ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಜನತೆ ಚಳಿಯಿಂದ ಪಾರಾಗಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯವೆನಿಸಿದೆ.
ಬೀದರ್ ನಗರ ಸೇರಿ ಜಿಲ್ಲೆಯ ಬಹುತೇಕ ಕಡೆ ನಾಲ್ಕೈದು ದಿನಗಳಿಂದ ಚಳಿ ಹೆಚ್ಚಿದ್ದು, ಬೆಳಗ್ಗಿನ ಜಾವ 9ರಿಂದ 10 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ನಗರ, ಪಟ್ಟಣಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ಕೆರೆ, ನದಿ ತೀರದಲ್ಲಿರುವ ಪ್ರದೇಶಗಳಲ್ಲಿ ಚಳಿ ಮೈ ಕೊರೆಸುತ್ತಿದೆ. ಈ ಸಲ ಜಿಲ್ಲೆಯಲ್ಲಿ ಅತಿವೃಷ್ಟಿ ಆಗಿರುವುದರಿಂದ ಬಹುತೇಕ ಕೆರೆಗಳು, ಮಾಂಜ್ರಾ ನದಿ, ಕಾರಂಜಾ ಜಲಾಶಯ ಹಾಗೂ ಎಲ್ಲ ಬ್ಯಾರೇಜುಗಳು ಭರ್ತಿಯಾಗಿವೆ. ಹಳ್ಳಗಳಲ್ಲೂ ಸಾಕಷ್ಟು ನೀರಿದೆ. ಹೀಗಾಗಿ ಇವುಗಳ ಪಕ್ಕದ ವಾಸಿಗಳಿಗೆ ಚಳಿ ತಾಪತ್ರಯ ಹೆಚ್ಚಾಗಿದೆ.
ವಿಪರೀತ ಚಳಿಯಿಂದಾಗಿ ಬೆಳಗ್ಗೆ 8 ಗಂಟೆಯಾದರೂ ಜನರು ಬೆಚ್ಚಗೆ ಮಲಗಿಕೊಳ್ಳಲು ಹಾತೊರೆಯುತ್ತಿದ್ದಾರೆ. ಇನ್ನು ಸಂಜೆಯಾಗುತ್ತಲೇ ಮನೆಗೆ ಸೇರಿಕೊಳ್ಳಲು ತವಕಿಸುತ್ತಿದ್ದಾರೆ. ಬೆಳಗ್ಗಿನ ಜಾವ 5ಕ್ಕೆ ಎದ್ದು ವಾಕಿಂಗ್ಗೆ ತೆರಳುವ ಬಹುತೇಕರು ಚಳಿಗೆ ಹೆದರಿ ಬ್ರೇಕ್ ಹಾಕಿದ್ದಾರೆ. ಮೂರ್ನಾಲ್ಕು ದಿನಗಳಿಂದ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಗಣನೀಯ ಕಡಿಮೆಯಾಗಿದೆ ಎಂದು ಬರೀದ್ ಶಾಹಿ ಉದ್ಯಾನದಲ್ಲಿ ಯೋಗ ಕಲಿಸುವ ಧೋಂಡಿರಾಮ್ ಚಾಂದಿವಾಲೆ, ಬಿವಿಬಿ ಕಾಲೇಜಿನಲ್ಲಿ ಯೋಗ ಹೇಳಿಕೊಡುವ ಯೋಗೇಂದ್ರ ಯದಲಾಪುರೆ ಹೇಳುತ್ತಾರೆ.
ಚಳಿ ಜೋರಾದ ಕಾರಣ ಸ್ವೇಟರ್, ಜಾಕೆಟ್, ಟೋಪಿ, ಮಫಲರ್ ಸುತ್ತಿಕೊಂಡು ಸುತ್ತಾಡಬೇಕಾಗಿದೆ. ಅಲ್ಲಲ್ಲಿ ಬೆಚ್ಚಗಿನ ಉಡುಪುಗಳ ಮಾರಾಟ ಜೋರು ನಡೆದಿದೆ. ವಿವಿಧೆಡೆ ಜನರು ರಾತ್ರಿ ಮತ್ತು ಬೆಳಗ್ಗಿನ ಜಾವ ಹುಲ್ಲು, ಕಸ-ಕಡ್ಡಿ ಸಂಗ್ರಹಿಸಿ ಬೆಂಕಿ ಹಚ್ಚಿ ಮೈ ಗರಂ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಂತೂ ಈ ದೃಶ್ಯಗಳು ಸದ್ಯ ಸಾಮಾನ್ಯವಾಗಿವೆ. ಅನೇಕರು ಬೆಳಗ್ಗೆ ಎದ್ದು ಸೂರ್ಯನತ್ತ ಮುಖ ಮಾಡಿ ಕೂಡುತ್ತಿದ್ದಾರೆ. ಜಿಲ್ಲೆಯ ಜನರು ಬರುವ ತಿಂಗಳ 15ರವರೆಗೆ ಚಳಿಯ ಪ್ರಕೋಪವನ್ನು ತಾಳಬೇಕಿದೆ.
ಭಾಲ್ಕಿ ತಾಲೂಕಿನಲ್ಲಿ ಹೆಚ್ಚು
ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲೇ ಚಳಿ ಮತ್ತಷ್ಟು ಹೆಚ್ಚಾಗಿದೆ. 2016, 2017ರಲ್ಲಿ ಭಾಲ್ಕಿ ತಾಲೂಕಿನಲ್ಲಿ ಕನಿಷ್ಠ ತಾಪಮಾನ ದಾಖಲೆ ಕುಸಿದಿತ್ತು. ಈಗಲೂ ಅದೇ ಪರಿಸ್ಥಿತಿ ಕಾಣುತ್ತಿದೆ. ಭಾಲ್ಕಿ ಚನ್ನಬಸವಾಶ್ರಮದ ಪಕ್ಕದಲ್ಲಿರುವ ಕೆರೆ ಮೂರು ವರ್ಷದ ಬಳಿಕ ಸಂಪೂರ್ಣ ತುಂಬಿರುವ ಕಾರಣ ಪಟ್ಟಣದ ಜನರಿಗೂ ಈ ಸಲ ಚಳಿ ಗಡಗಡ ನಡುಗಿಸುತ್ತಿದೆ. 2017ರ ಡಿಸೆಂಬರ್ ನಲ್ಲಿ ಭಾಲ್ಕಿ ತಾಲೂಕಿನ ಹಲಬರ್ಗಾ ವಲಯದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಜಿಲ್ಲೆಯಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ ಎನಿಸಿದೆ. ಈಗಿನ ಕುಗ್ಗಿರುವ ತಾಪಮಾನ ಗಮನಿಸಿದರೆ ಬರುವ ದಿನಗಳಲ್ಲಿ ಈ ದಾಖಲೆ ಸಹ ಮುರಿಯುವ ಲಕ್ಷಣಗಳು ಕಾಣುತ್ತಿವೆ.
ಚಿಕ್ಕ ಮಕ್ಕಳ ತಾಪತ್ರಯ
ಹೆಚ್ಚಿನ ಚಳಿಯು ಹತ್ತು ವರ್ಷದೊಳಗಿನ ಚಿಕ್ಕ ಚಿಕ್ಕ ಮಕ್ಕಳಿಗೆ ಎಲ್ಲಿಲ್ಲದ ತಾಪತ್ರಯ ತಂದಿದೆ. ಸದ್ಯಕ್ಕೆ ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇಲ್ಲ. ಇದು ಬೆಳಗ್ಗಿನ ಜಾವ ಎದ್ದು ವ್ಯಾನ್ ಗಳಲ್ಲಿ ಹೋಗಬೇಕಾದ ಸಂಕಷ್ಟ ತಪ್ಪಿಸಿದೆ. ಆದರೆ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದರಿಂದ ಬೆಳಗ್ಗೆ ಬೇಗ ಏಳಬೇಕು. ಸ್ವೇಟರ್, ಟೋಪಿ ಹಾಕಿದರೂ ಚಳಿ ಕಮ್ಮಿಯಾಗುತ್ತಿಲ್ಲ. ಬೆಳಗ್ಗಿನ ಜಾವ ಒಂದರ ಮೇಲೊಂದು ಹೊದಿಕೆ ಹಾಕಿಕೊಂಡು ಪುಟಾಣಿಗಳು ಮಲಗಲು ಬಯಸುತ್ತಿದ್ದಾರೆ. ನಾಲ್ಕೈದು ದಿನಗಳ ಥಂಡಿಯು ಹಲವು ಮಕ್ಕಳಿಗೆ ಶೀತ, ಕೆಮ್ಮು, ಗಂಟಲುನೋವಿಗೂ ಕಾರಣವಾಗಿದೆ.
ಚಳಿ ಜಾಸ್ತಿಯಿರುವಾಗ ನರ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಆದರೆ ಭಯಪಡುವ ಅಗತ್ಯವಿಲ್ಲ. ದೇಹದ ತಾಪಮಾನ ಸಮರ್ಪಕವಾಗಿಟ್ಟುಕೊಳ್ಳಲು ಬೆಚ್ಚನೆ ಉಡುಪು ಧರಿಸಬೇಕು. ಹತ್ತಿಯಿಂದ ಕಿವಿ ಮುಚ್ಚಿಕೊಳ್ಳಬೇಕು. ಬಿಸಿ ನೀರು, ಬಿಸಿಯಾದ ತಾಜಾ ಆಹಾರ ಸೇವಿಸಬೇಕು. ತರಕಾರಿಗಳಲ್ಲಿ ಸೊಪ್ಪು ಸೇವನೆ ಅಧಿಕ ಇರಬೇಕು. ಫ್ರಿಜ್ ನಲ್ಲಿ ಇಟ್ಟಿರುವ ಪದಾರ್ಥ ಕೆಲವು ದಿನ ಬಳಸದಿರುವುದೇ ಉತ್ತಮ.| ಡಾ. ಮನೀಶ್ ಕೆ., ನ್ಯೂರೋ ಫಿಜಿಶಿಯನ್
ತಾಪಮಾನ ಕಡಿಮೆಯಿದ್ದಾಗ ಚರ್ಮ ಡ್ರೈ ಆಗಿ, ಒಡೆಯುವುದರಿಂದ ಸೂಕ್ತ ಕ್ರೀಮ್ ಗಳು ಬಳಸಬೇಕು. ಮಜ್ಜಿಗೆ, ಮೊಸರು ಕಮ್ಮಿ ಮಾಡಬೇಕು. ಐಸ್ಕ್ರೀಮ್ ಸೇರಿ ತಂಪು ಪದಾರ್ಥ ಸೇವಿಸಕೂಡದು. ಅಸ್ತಮಾ ರೋಗಿಗಳು ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆದು ಮುನ್ನೆಚ್ಚರಿಕೆ ವಹಿಸಬೇಕು.| ಡಾ. ರಾಜೇಶ್ ಕಾಮತಿಕರ್ಬ್ರಿಮ್ಸ್ ಅಸೋಸಿಯೇಟ್ ಪ್ರೊಫೆಸರ್