ಗೆಲ್ಲುವುದೊಂದೇ ಮಂತ್ರ, ಮತ ವಿಭಜನೆಯ ತಂತ್ರ

Election
Published on

| ಪರಶುರಾಮ ಭಾಸಗಿ ವಿಜಯಪುರ

ಸಿಂದಗಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭೀಮಾತೀರದಲ್ಲೇ ಬೀಡು ಬಿಟ್ಟಿದ್ದು, ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ. ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಅ.30ರಂದು ನಡೆಯಲಿರುವ ಚುನಾವಣೆಗೆ ಮೂರೂ ಪಕ್ಷಗಳು ಪ್ರಚಾರದ ಪೈಪೋಟಿಗಿಳಿದಿವೆ. ಬಿಜೆಪಿಯಿಂದ ಮಾಜಿ ಶಾಸಕ ರಮೇಶ ಭೂಸನೂರ, ಕಾಂಗ್ರೆಸ್​ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್​ನಿಂದ ನಾಜಿಯಾ ಶಕೀಲ್ ಅಂಗಡಿ ಸೇರಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಎನಿಸಿದರೂ ಜೆಡಿಎಸ್ ಪ್ರಬಲ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕ್ಷೇತ್ರದಲ್ಲಿ 2004ರಿಂದ ಕಾಂಗ್ರೆಸ್ ತೃತೀಯ ಸ್ಥಾನದಲ್ಲಿದ್ದು, ಜೆಡಿಎಸ್ ಮತ್ತು ಬಿಜೆಪಿ ಮಧ್ಯೆಯೇ ಪೈಪೋಟಿ ಏರ್ಪಟ್ಟಿದೆ. ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಜೆಡಿಎಸ್​ನಿಂದ ಕಣಕ್ಕಿಳಿದಿರುವುದು ಕುತೂಹಲ ಹೆಚ್ಚಿಸಿದೆ.

ವಿಭಜನೆ ಲೆಕ್ಕಾಚಾರ ಜೋರು

ಸಿಂದಗಿ ಕ್ಷೇತ್ರದಲ್ಲಿ ಮತ ಗಳಿಕೆಗಿಂತ ಮತ ವಿಭಜನೆ ಲೆಕ್ಕಾಚಾರವೇ ಜೋರಾಗಿದೆ. ಮುಸ್ಲಿಂ ಮತಗಳು ಜೆಡಿಎಸ್ ಪಾಲಾಗುವ ಮೂಲಕ ಕಾಂಗ್ರೆಸ್​ಗೆ ಹೊಡೆತ ನೀಡಿದರೆ, ತಳವಾರ ಮತ್ತು ಪರಿವಾರ ಸಮುದಾಯದ ಮತಗಳು ಬಿಜೆಪಿಯಿಂದ ವಿಮುಖವಾಗುತ್ತಿವೆ. ಕಾರಣ ಎಸ್​ಟಿ ಪ್ರಮಾಣ ಪತ್ರದ ಗೋಜಲು ಹಾಗೂ ಈಚೆಗೆ ಗೋವಿಂದ ಕಾರಜೋಳ ನಿರ್ಲಕ್ಷ್ಯ ಮಾತು ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬರ ಮತಗಳು ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್​ಗೆ ದಕ್ಕುವವೋ ಅಥವಾ ಈಶ್ವರಪ್ಪ ಮೂಲಕ ಬಿಜೆಪಿ ಪಾಲಾಗುವವೋ ಎಂಬ ಲೆಕ್ಕಾಚಾರ ನಡೆದಿದೆ. ದಲಿತ ಸಮುದಾಯದ ಮತಗಳನ್ನು ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿ ಬಿಜೆಪಿಗೆ ಸೆಳೆಯಲು ಶ್ರಮಿಸುತ್ತಿದ್ದಾರೆ.

ಬಿಜೆಪಿ ವ್ಯವಸ್ಥಿತ ಹೋರಾಟ

ಶಿಸ್ತಿನ ಪಕ್ಷ ಎಂದೇ ಗುರುತಿಸಿಕೊಂಡ ಬಿಜೆಪಿ ಅಚ್ಚುಕಟ್ಟಾಗಿ ಚುನಾವಣೆ ಪ್ರಚಾರಕ್ಕಿಳಿದಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಉಸ್ತುವಾರಿ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 7 ಜಿಪಂ ಕ್ಷೇತ್ರಗಳಿವೆ. ಚುನಾವಣೆ ಉಸ್ತುವಾರಿಗೆ ಕ್ಷೇತ್ರಕ್ಕೊಬ್ಬರಂತೆ ಸಚಿವರು, ಪಕ್ಷದ ಪ್ರಮುಖರನ್ನು ನೇಮಕ ಮಾಡಲಾಗಿದೆ. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಭೈರತಿ ಬಸವರಾಜ, ವಿ.ಸೋಮಣ್ಣ ಮತ್ತಿತರರಿಗೆ ಹೊಣೆಗಾರಿಕೆ ನೀಡಲಾಗಿದೆ. ಬಿಜೆಪಿಗೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳೇ ಪ್ರಚಾರದ ಪ್ರಮುಖ ಸರಕಾಗಿದೆ. 2 ಬಾರಿ ಶಾಸಕರಾಗಿ, 2018ರಲ್ಲಿ ಪರಾಭವಗೊಂಡಿರುವ ರಮೇಶ ಭೂಸನೂರ ಹಿಂದಿನ ಸಾಧನೆ ಮುಂದಿಟ್ಟುಕೊಂಡು ಮತಬೇಟೆ ನಡೆಸಿದ್ದಾರೆ.

ಜೆಡಿಎಸ್​ಗೆ ದೇವೇಗೌಡರ ಬಲ

ಕ್ಷೇತ್ರದಲ್ಲಿ ನಿರ್ಣಾಯಕ ಮತ ಹೊಂದಿರುವ ಮುಸ್ಲಿಂ ಸಮುದಾಯದ ನಾಜಿಯಾ ಅಂಗಡಿ ಜೆಡಿಎಸ್​ನಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳಿಗೆ ಪೆಟ್ಟು ನೀಡಿದೆ. 2018ರಲ್ಲಿ ಮುಸ್ಲಿಂ ಸಮುದಾಯ ಜೆಡಿಎಸ್ ಪರ ನಿಂತಿತ್ತು. ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದ್ದರಿಂದ ಚುನಾವಣೆ ಕಣ ರಂಗೇರಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಅಖಾಡಕ್ಕೆ ಎಂಟ್ರಿ ಕೊಟ್ಟಿರುವುದು ನಾಜಿಯಾ ಆತ್ಮಬಲ ಹೆಚ್ಚಿಸಿದೆ. ದಿ.ಎಂ.ಸಿ.ಮನಗೂಳಿ ಜೆಡಿಎಸ್​ನಿಂದ ಶಾಸಕರಾಗಿ, ಸಚಿವರಾಗಿ ಮಾಡಿದ ಸಾಧನೆಗಳನ್ನೇ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿಚಿತ್ರವೆಂದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ದಿ.ಎಂ.ಸಿ. ಮನಗೂಳಿ ಭಾವಚಿತ್ರವನ್ನು ಎಲ್ಲೂ ಬಳಸುತ್ತಿಲ್ಲ.

ಕಾಂಗ್ರೆಸ್​ಗೆ ಅನುಕಂಪವೇ ಆಧಾರ

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ವಾರದಿಂದ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಶಾಸಕರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಬಿರುಸಿನ ಪ್ರಚಾರ ನಡೆಸಿದ್ದಾರೆ. ಈಶ್ವರ ಖಂಡ್ರೆ ಕ್ಷೇತ್ರದಲ್ಲೇ ಇದ್ದಾರಾದರೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಸೂಕ್ತ ಅಭ್ಯರ್ಥಿ ಸಿಗದೆ ಜೆಡಿಎಸ್​ನ ಮಾಜಿ ಶಾಸಕ ದಿ.ಎಂ.ಸಿ.ಮನಗೂಳಿ ಪುತ್ರ ಅಶೋಕ ಅವರನ್ನು ಕರೆತರುವ ಮೂಲಕ ಕಾಂಗ್ರೆಸ್ ಅನುಕಂಪದ ಲಾಭ ಪಡೆಯುವ ಯೋಜನೆ ಹಾಕಿಕೊಂಡಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಆ ಅನುಕಂಪದ ಭಾವ ಲವಲೇಶವೂ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿಯ ಬೆಲೆ ಏರಿಕೆ ನೀತಿ, ಕೃಷಿ ಕಾಯ್ದೆ, ಆರ್​ಎಸ್​ಎಸ್ ಮತ್ತಿತರ ವಿಷಯಗಳೇ ಕಾಂಗ್ರೆಸ್​ನ ಪ್ರಚಾರದ ಸರಕಾಗಿದೆ.

2018ರ ಚಿತ್ರಣ

ಬಿಜೆಪಿಯಿಂದ ರಮೇಶ ಭೂಸನೂರ, ಜೆಡಿಎಸ್​ನಿಂದ ಎಂ.ಸಿ.ಮನಗೂಳಿ ಹಾಗೂ ಕಾಂಗ್ರೆಸ್​ನಿಂದ ಮಲ್ಲಣ್ಣ ಸಾಲಿ ಸೇರಿ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದರು. ಎಂ.ಸಿ.ಮನಗೂಳಿ (70865) 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ (61560) ಹ್ಯಾಟ್ರಿಕ್ ಸಾಧನೆಯಿಂದ ವಂಚಿತರಾದರೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಣ್ಣ ಸಾಲಿ (22818) ತೃತೀಯ ಸ್ಥಾನಕ್ಕೆ ಕುಸಿದಿದ್ದರು. ಮನಗೂಳಿ ಗೆಲುವಿಗೆ ಅನುಕಂಪವೇ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net