

ತಿ.ನರಸೀಪುರ : ಸಮಾಜವನ್ನು ಚುನಾವಣೆ ಮುಖಾಂತರ ಗೆದ್ದು ಸೇವೆ ಮಾಡುತ್ತೇವೆ, ಮುನ್ನಡೆಸುತ್ತೇವೆ ಎಂಬುದು ಕನಸಿನ ಮಾತು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರ ಹುಂಡಿ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿಗೆ 21 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ತಾಲೂಕಿನ ಹೆಳವರ ಹುಂಡಿ ಗ್ರಾಮದ ತಮ್ಮ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಶಕಗಳಿಂದಲೂ ತಿ.ನರಸೀಪುರ ವೀರಶೈವ ಘಟಕಕ್ಕೆ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡುವ ಪದ್ಧತಿ ಬೆಳೆದು ಬಂದಿತ್ತು. ಕಳೆದ ಚುನಾವಣೆಯಲ್ಲಿ ಕಠಿಣ ಸ್ಪರ್ಧೆಯಿದ್ದರೂ ಅಭ್ಯರ್ಥಿಗಳ ಮನವೊಲಿಸಿ ಅವಿರೋಧ ಆಯ್ಕೆ ಮಾಡಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಅವಿರೋಧ ಆಯ್ಕೆ ಸಾಧ್ಯವಾಗದಿರುವುದು ಬೇಸರದ ಸಂಗತಿಯಾಗಿದೆ ಎಂದು ನೊಂದು ನುಡಿದರು.
ಈ ಬಾರಿಯ ಚುನಾವಣೆಯಲ್ಲಿ 10 ಜನರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದು, ಅವರಲ್ಲಿ ಒಮ್ಮತ ಮೂಡಿಸುವ ಸಲುವಾಗಿ ಅನೇಕ ಸುತ್ತಿನ ಚರ್ಚೆ, ಸಂಧಾನ ಮಾಡುವ ಪ್ರಕ್ರಿಯೆ ಮಾಡಲಾಯಿತು. ಚುನಾವಣೆ ನಡೆಸುವುದು ಬೇಡ, ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳೋಣ ಎಂಬ ಸದುದ್ದೇಶದಿಂದ ತಾಲೂಕಿನ ಎಲ್ಲ ವೀರಶೈವ ಲಿಂಗಾಯತ ಮುಖಂಡರ ಸಭೆಯನ್ನು ವಾಟಾಳು ಮಠದಲ್ಲಿ ಕರೆಯಲಾಗಿತ್ತು. ಮೂರು ಬಾರಿ ಸಭೆ ನಡೆದ ನಂತರ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಲು ಎಲ್ಲ ಆಕಾಂಕ್ಷಿಗಳು ಒಮ್ಮತ ಸೂಚಿಸಿದ್ದರಾದರೂ, ಮಠದಿಂದ ಹೊರಬಂದ ನಂತರ ಅವಿರೋಧ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು ಎಂದು ಬೇಸರಿಸಿದರು.
ನಾನು ಸ್ಪರ್ಧಿಸದೆ ಸಹಕಾರ ಸಂಘದ ಅಧ್ಯಕ್ಷರಾಗಿ ಅನುಭವ ಹೊಂದಿರುವ ಬಿ.ವೀರಭದ್ರಪ್ಪ ಅವರಿಗೆ ನನ್ನ ಬೆಂಬಲ ಸೂಚಿಸಿದ್ದೇನೆ. ಎಸ್.ಎಂ.ಆರ್.ಪ್ರಕಾಶ್ ಅವರ ಪ್ರತಿಸ್ಪರ್ಧಿಯಾಗಿ ವೀರಭದ್ರಪ್ಪ ಸ್ಪರ್ಧಾ ಕಣದಲ್ಲಿದ್ದು ವಾಟಾಳು ಶ್ರೀಗಳು ಜನ ಮತ ಪಡೆದು ಬನ್ನಿ ಎಂದು ಆಶೀರ್ವಾದ ಮಾಡಿದ್ದಾರೆ. ಬಿ.ವೀರಭದ್ರಪ್ಪ ಅವರು ನಮ್ಮ ತಂಡದ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ನಾವೆಲ್ಲರೂ ಅವರ ಗೆಲುವಿಗೆ ಶ್ರಮ ವಹಿಸಿ ಕೆಲಸ ಮಾಡೋಣ ಎಂದು ತಿಳಿಸಿದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ತಾಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಡೇರಿ ಅಧ್ಯಕ್ಷ ಡಿ.ಎಲ್.ಮಹದೇವಪ್ಪ, ಸಮಾಜದ ಮುಖಂಡ ಕು.ಶಿ.ಬೃಂಗೀಶ್, ವಾಟಾಳ್ ಗುರುಪಾದ, ಕೆಬ್ಬೇಹುಂಡಿ ಶಿವಕುಮಾರ್, ಅದೃಷ್ಟ ಮಾದಪ್ಪ, ಕೇಬಲ್ ರಾಜಶೇಖರ್, ಗೌಡರ ಪ್ರಕಾಶ್, ಬಜ್ಜಿ ನಿಂಗಪ್ಪ, ಹೆಳವರಹುಂಡಿ ಮೂರ್ತಿ, ಸಿದ್ದೇಶ್ ಇತರರು ಇದ್ದರು.