ಸೋಲು-ಗೆಲುವು ನಾಯಕತ್ವ ರೂಪಿಸಲ್ಲ

12avt p3
ಸೊರಬ ತಾಲೂಕಿನ ಕುಬಟೂರು ದೊಡ್ಡಕೆರೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಬಾಗಿನ ಅರ್ಪಿಸಿದರು.
Published on

ಸೊರಬ/ಆನವಟ್ಟಿ: ಚುನಾವಣೆಯಲ್ಲಿನ ಸೋಲು-ಗೆಲುವುಗಳು ಯಾವುದೇ ರಾಜಕಾರಣಿಯ ನಾಯಕತ್ವವನ್ನು ರೂಪಿಸುವುದಿಲ್ಲ. ಚುನಾವಣೆಯಲ್ಲಿ ಸೋಲು ಕಂಡಾಗಲೂ ಮಾಡಿದ ಜನಪರ ಹೋರಾಟಗಳು, ವ್ಯಕ್ತಿಗತ ನಡವಳಿಕೆ ಹಾಗೂ ಜನರೊಂದಿಗಿನ ಸ್ಪಂದನೆ ಜನಮಾನಸದಲ್ಲಿ ಕಡೆಯವರೆಗೂ ನಾಯಕರಾಗಿಯೇ ಉಳಿಸುತ್ತವೆ ಎಂದು ಸಚಿವ ಮಧುಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕುಬಟೂರಿನ ಗ್ರಾಮದೇವತೆ ದ್ಯಾಮವ್ವ ದೇವಿ ದೇವಾಲಯದ ಆವರಣದಲ್ಲಿ ಗ್ರಾಮದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ನಾಲ್ಕಾರು ಬಾರಿ ಸೋತರು ತಾಲೂಕಿನಲ್ಲಿ ನನ್ನ ನಾಯಕತ್ವ ಕಳೆಗುಂದಲಿಲ್ಲ. ಸೋತಾಗಲೂ ಅಂದು ನಾನು ನೀರಾವರಿಗಾಗಿ ನಡೆಸಿದ ಪಾದಯಾತ್ರೆ ಫಲವಾಗಿ ಬರಗಾಲದಲ್ಲೂ ಕೆರೆಗಳು ತುಂಬಲು ಸಹಕಾರಿಯಾಗಿದೆ. ನನ್ನ ತಂದೆ ಬಂಗಾರಪ್ಪನವರು ಮೂರ‌್ನಾಲ್ಕು ದಶಕಗಳ ಹಿಂದೆಯೇ ಮುಂದಿನ ದಿನಗಳ ನೀರಿನ ಭವಣೆಯನ್ನು ಅರಿತು ಏತ ನೀರಾವರಿ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ್ದರಿಂದ ಶೀಘ್ರವಾಗಿ ಯೋಜನೆ ಅನುಷ್ಠಾನಗೊಳಿಸಲು ಸಹಕಾರಿಯಾಯಿತು. ನನ್ನ ಪಾದಯಾತ್ರೆಯ ಫಲವಾಗಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೋಜನೆಗೆ ಮಂಜೂರಾತಿ ನೀಡಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಅವರು ಸಹ ಸಹಕಾರ ನೀಡಿ ಯೋಜನೆ ಜಾರಿಗೆ ನೆರವಾಗಿದ್ದರು. ಇಬ್ಬರಿಗೂ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ರಾಜ್ಯದಿಂದ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಿಸಿ ಕಳುಹಿಸುವ ಭರವಸೆಯನ್ನು ಪಕ್ಷದ ವರಿಷ್ಠರು ಇಟ್ಟುಕೊಂಡಿದ್ದಾರೆ. ಪಕ್ಷವನ್ನು ಸಂಘಟಿಸಿ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಸಂಸದರೊಬ್ಬರನ್ನು ಆಯ್ಕೆ ಮಾಡಿ ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕುಬಟೂರು ಗ್ರಾಮದ ನೂತನ ಶಾಲಾ ಕೊಠಡಿಯನ್ನು ಸಚಿವರು ಉದ್ಘಾಟಿಸಿದರು. ಗ್ರಾಮದ ಹಿರಿಯರಾದ ಸುರೇಶ್ ರಾವ್, ಕೆ.ಪಿ.ಶಿವಾನಂದಯ್ಯ, ವೀರಬಸಪ್ಪ, ಬಸವಂತಪ್ಪ, ಅಶೋಕ್ ರಾವ್, ಪರಮೇಶ್ವರಪ್ಪ, ನಿಂಗಪ್ಪ ಮಾಸ್ತರ, ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆ. ಚಂದ್ರಶೇಖರಪ್ಪ, ಸದಾನಂದ ಗೌಡ, ಜಯಶೀಲಪ್ಪ, ಕೆ.ಪಿ ರುದ್ರಗೌಡ, ರುದ್ರಪ್ಪ ಕಡ್ಲೇರ್, ಕಿರಣಕುಮಾರ್, ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆಯ ಆದಿಶೇಶ್, ಮಂಜಪ್ಪ ಮಾಸ್ತರ, ಮಂಜುನಾಥ ಪಿ,ಎಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net