

ಮಂಗಳೂರು: ಲಾಕ್‌ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಮೇ 4ರಿಂದ ಬೆಳಗ್ಗೆ 9ರಿಂದ ಸಂಜೆ 7ಗಂಟೆ ತನಕ ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ದ.ಕ ಜಿಲ್ಲಾಡಳಿತ ಷರತ್ತಿನ ಅನುಮತಿ ನೀಡಿದೆ. ಇದಕ್ಕಾಗಿ ವೈನ್‌ಶಾಪ್‌ಗಳ ಎದುರು ಭಾನುವಾರವೇ ಸಿದ್ಧತೆ ನಡೆಸಲಾಗಿದೆ.
ಮಂಗಳೂರು ನಗರದ ವಿವಿಧ ವೈನ್‌ಶಾಪ್‌ಗಳ ಎದುರು ಗ್ರಾಹಕರು ಸರತಿ ಸಾಲಿನಲ್ಲಿ ಬರಲು ಬ್ಯಾರಿಕೇಡ್ ಅಳವಡಿಸಲಾಗಿದೆ. ಅಂತರ ಕಾಯ್ದುಕೊಳ್ಳಲು ವೃತ್ತಾಕಾರದ ಮಾರ್ಕ್‌ಗಳನ್ನು ಹಾಕಲಾಗಿದೆ. ರಜೆಯಲ್ಲಿ ತೆರಳಿದ ವೈನ್‌ಶಾಪ್ ಸಿಬ್ಬಂದಿ ಕರ್ತವ್ಯಕ್ಕೆ ಮರಳಲು ಸಿದ್ಧರಾಗಿದ್ದಾರೆ.
ವೈನ್‌ಶಾಪ್‌ಗಳಲ್ಲಿ ಮೂವರು ಮಾತ್ರ ಸಿಬ್ಬಂದಿ ಇರಬೇಕು. ಮದ್ಯ ಮಳಿಗೆಯ ಒಳಗೆ ಐವರು, ಹೊರಗೆ ಐವರು ಗ್ರಾಹಕರಿಗೆ ಅವಕಾಶ. ಅಂಗಡಿ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಗುಂಪು ಸೇರದಂತೆ ಕಾವಲು ಹಾಕಬೇಕು. ಇಬ್ಬರು ಭದ್ರತಾ ಸಿಬ್ಬಂದಿ ಅಳವಡಿಸಬೇಕು. ಗ್ರಾಹಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ಗ್ರಾಹಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಲು ನಿರ್ದೇಶನ ನೀಡಬೇಕು.
ಓರ್ವ ಗ್ರಾಹಕನಿಗೆ ನಿಗದಿಪಡಿಸಿದ ಮದ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಅಂಗಡಿ ಹೊರ ಭಾಗದಲ್ಲಿ 5 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮದ್ಯ ಬಿಟ್ಟು ಉಳಿದ ಯಾವುದೇ ಪದಾರ್ಥ ಮಾರಾಟ ಮಾಡುವಂತಿಲ್ಲ. ಗ್ರಾಹಕರು 6 ಅಡಿಗಿಂತ ಕಡಿಮೆ ಇಲ್ಲದೆ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು. ನಿಯಮ ಉಲ್ಲಂಘನೆಯಾದರೆ ಅಬಕಾರಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ಎಲ್ಲ ಮದ್ಯ ಮಳಿಗೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಮದ್ಯ ಪಾನೀಯ ನಿಗಮ ನಿಯಮಿತದ ಡಿಪೋದಲ್ಲಿ ದಾಸ್ತಾನು ಇದೆ. 152 ಸಿಎಲ್-2 ವೈನ್ ಶಾಪ್ ಹಾಗೂ 22 ಎಂಎಸ್‌ಐಎಲ್ ಮದ್ಯದಂಗಡಿ ಸೇರಿ ಒಟ್ಟು 174 ಮದ್ಯದಂಗಡಿಗಳು ತೆರೆಯಲಿದೆ. ಯಾರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುವ ಅಗತ್ಯ ಇಲ್ಲ. ಸೂಚಿಸಲಾದ ಎಲ್ಲ ಮುಂಜಾಗ್ರತಾ ಕ್ರಮ ಅನುಸರಿಸಿ ಗ್ರಾಹಕರಿಗೆ ಮದ್ಯ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಶೈಲಜಾ ಕೋಟೆ ಉಪ ಆಯುಕ್ತರು, ಅಬಕಾರಿ ಇಲಾಖೆ ದ.ಕ.