ವಿಂಡ್ರೊ ಕಾಂಪೋಸ್ಟ್ ಘಟಕ ನಿರ್ಮಾಣ: ಪ್ರತಿದಿನ 37 ಟನ್ ಹಸಿ ತ್ಯಾಜ್ಯ ನಿರ್ವಹಣೆ ಸಾವಯವ ಗೊಬ್ಬರ ಮಾಡಿ ಮಾರಾಟ

udp-8-windrow compost
Published on

ಉಡುಪಿ: ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಪ್ರತಿ ದಿನ ಆಹಾರ ಪದಾರ್ಥ, ತರಕಾರಿ, ಮೀನು, ಮಾಂಸ ಇತ್ಯಾದಿಗಳಿಂದ ಸರಾಸರಿ 37 ಟನ್ ಹಸಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ವೈಜ್ಞಾನಿಕವಾಗಿ ಈ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ 68 ಲಕ್ಷ ರೂ. ವೆಚ್ಚದಲ್ಲಿ ವಿಂಡ್ರೊ ಕಾಂಪೋಸ್ಟ್ ಘಟಕ ನಿರ್ಮಾಣಕ್ಕೆ ನಗರಸಭೆ ಸಿದ್ಧತೆ ನಡೆಸಿದೆ.

ಅಲೆವೂರು ಸಮೀಪದಲ್ಲಿರುವ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ನಗರಸಭೆ ಕಳೆದ ಕೆಲವು ವರ್ಷಗಳಿಂದ ಹಸಿ ಕಸವನ್ನು ಒಂದೆಡೆ ಸುರಿದು ನಾಲ್ಕೈದು ದಿಬ್ಬಗಳಂತೆ ವಿಂಗಡಿಸಿ ವಾರಕ್ಕೆ ಒಮ್ಮೆ ಮಿಕ್ಸಿಂಗ್ ಮಾಡುತ್ತ್ತಿದೆ. ಇದು 45 ರಿಂದ 40 ದಿನಗಳಲ್ಲಿ ಕಾಂಪೋಸ್ಟ್ ಆಗುತ್ತದೆ. ಆದರೆ ಈ ಕಾಂಪೋಸ್ಟ್‌ನ ಸಮರ್ಪಕ ವಿಲೇವಾರಿ ಸಾಧ್ಯವಾಗಿಲ್ಲ. ಹೀಗಾಗಿ ಹೊಸ ವಿಂಡ್ರೊ ಕಾಂಪೋಸ್ಟ್ ಘಟಕದಲ್ಲಿ ಯಂತ್ರೋಪಕರಣ ಸಹಾಯದಿಂದ ಕಾಂಪೋಸ್ಟ್ ಗೊಬ್ಬರವನ್ನು ಒಣಗಿಸಿ ಬಳಿಕ ಪ್ಲಾಸ್ಟಿಕ್‌ನ ಸಣ್ಣ ತುಂಡು ಗೊಬ್ಬರಕ್ಕೆ ಹೋಗದಂತೆ ಸಂಸ್ಕರಿಸಲಾಗುತ್ತದೆ. ಅನಂತರ ಪ್ರತ್ಯೇಕ ಯಂತ್ರಗಳಲ್ಲಿ ಚಹಾ ಪುಡಿ ಗಾತ್ರದಲ್ಲಿ ಹದವಾಗಿ ಪುಡಿ ಮಾಡಲಾಗುತ್ತದೆ. 36 ಎಂಎಂ, 16 ಎಂಎಂ, 4 ಎಂಎಂನಲ್ಲಿ ಸಂಸ್ಕರಿಸಿ ಪುಡಿ ಮಾಡುವ ಯಂತ್ರಗಳನ್ನು ಘಟಕದಲ್ಲಿ ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮೂರು ತಿಂಗಳೊಳಗೆ ಘಟಕ ಸಿದ್ಧವಾಗುತ್ತದೆ. ಗೊಬ್ಬರದ ಪುಡಿಯನ್ನು ಬ್ಯಾಗ್‌ನಲ್ಲಿ ತುಂಬಿಸಿ ಉತ್ತಮ ದರಕ್ಕೆ ಮಾರಾಟ ಮಾಡಲಾಗುತ್ತದೆ. ಇದರಿಂದ ನಗರಸಭೆಗೂ ಆದಾಯ ಬರಲಿದೆ.

ತೋಟಗಾರಿಕೆ ಇಲಾಖೆ ಅನುಮೋದನೆ: ನಗರಸಭೆ ವಿಂಡ್ರೊ ಕಾಂಪೋಸ್ಟ್‌ನ ಪ್ರಾಯೋಗಿಕ ಗೊಬ್ಬರದ ಮಾದರಿಯನ್ನು ಬೆಂಗಳೂರಿನ ತೋಟಗಾರಿಕೆ ಇಲಾಖೆ ಬಯೋಸೆಂಟರ್‌ಗೆ ಕಳುಹಿಸಲಾಗಿದ್ದು, ತಜ್ಞರಿಂದ ಪರೀಕ್ಷೆಗೆ ಒಳಪಟ್ಟಿದೆ. ತೋಟಗಾರಿಕೆ ಬೆಳೆಗಳಿಗೆ ಬಳಸಬಹುದಾದ ಪೂರಕ ಗೊಬ್ಬರ ಎಂಬುದಾಗಿ ಇಲಾಖೆಯ ಪ್ಲಾಂಟ್ ನ್ಯೂಟ್ರೀಶಿಯನ್ ವಿಭಾಗ ಅನುಮೋದನೆ ವರದಿ ನೀಡಿದೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿಯೂ ಗೊಬ್ಬರದ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ.

ವಿಂಡ್ರೊ ಕಾಂಪೋಸ್ಟ್ ಘಟಕದಿಂದ ಉತ್ಪಾದಿಸುವ ಗೊಬ್ಬರವನ್ನು ಮುಂದಿನ ದಿನಗಳಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಹೆಚ್ಚು ಸಂಸ್ಕರಿತವಲ್ಲದ 150 ಟನ್ ಗೊಬ್ಬರವನ್ನು ಪ್ರಾಯೋಗಿಕವಾಗಿ ಉತ್ಪಾದಿಸಿ ರೈತರಿಗೆ ವಿತರಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಂತ್ರೋಪಕರಣ ಅಳವಡಿಕೆ ನಡೆಯುತ್ತಿದ್ದು, ಮೂರು ತಿಂಗಳ ಒಳಗೆ ಘಟಕ ಕಾರ್ಯಾರಂಭ ಮಾಡಲಿದೆ.

-ಸ್ನೇಹಾ ಪರಿಸರ ಎಂಜಿನಿಯರ್, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net