

ಸುಬ್ರಹ್ಮಣ್ಯ: ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮುಕುಲ್ ಮಾಥೂರ್ ಹಾಸನದಿಂದ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದ ತನಕ ಸಮಗ್ರ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿದರು.
ಪ್ರಯಾಣಿಕರಿಗೆ ಒದಗಿಸುವ ಸೌಕರ್ಯ ಮೌಲ್ಯಮಾಪನ ಮಾಡಿದರು. ಯಾತ್ರಿಕರು ಮತ್ತು ಸಂದರ್ಶಕರ ಬೇಡಿಕೆಯನ್ನು ಪೂರೈಸಲು ಬೇಕಾದ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ವಿಭಾಗದ ಕೆಲಸ ಮತ್ತು ಹಳಿಗಳನ್ನು ಪ್ರಧಾನ ವ್ಯವಸ್ಥಾಪಕರು ಪರಿಶೀಲಿಸಿದರು. ಈ ಸವಾಲಿನ ಭೂಪ್ರದೇಶದಲ್ಲಿ ವಿವಿಧ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗರಿಷ್ಠ ಅನುಮತಿ ವೇಗದಲ್ಲಿ ರೈಲು ಚಾಲನೆಗೆ ಕ್ರಮ ವಹಿಸುವ ಬಗ್ಗೆ ಚರ್ಚಿಸಿದರು.
ಯಾವುದೇ ಶಾರ್ಟ್‌ಕಟ್‌ಗಳಿಲ್ಲದೆ ಕಠಿಣ ಸುರಕ್ಷತಾ ಕ್ರಮಗಳನ್ನು ಅನುಸರಿಸಲು, ಸುರಕ್ಷಿತ ಮತ್ತು ವಿಶ್ವಾಸಾರ್ಹ ರೈಲು ಕಾರ್ಯಾಚರಣೆಗಳಿಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದರು.
ಕುಕ್ಕೆ ಭೇಟಿ: ಮುಕುಲ್ ಮಾಥೂರ್ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವರ ದರ್ಶನ ಪಡೆದ ಅವರಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮೈಸೂರು ನೈಋತ್ಯ ರೈಲ್ವೆಯ ವಿಭಾಗೀಯ ಮ್ಯಾನೇಜರ್ ಶಿಲ್ಪಾ ಅಗರ್ವಾಲ್ ರೈಲ್ವೆ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ಇಂಜಿನಿಯರ್‌ಗಳು, ತಾಂತ್ರಿಕ ಅಧಿಕಾರಿಗಳು ಜತೆಗಿದ್ದರು.