

ಶಿವಾನಂದ ಹಿರೇಮಠ ಗದಗ
ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯದ ದಕ್ಷಿಣ ಜಿಲ್ಲೆಗಳಿಗಿಂತ ಶೇ.69ರಷ್ಟು ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳು ಪವನ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ರಾಜ್ಯದ ಒಟ್ಟು ಉತ್ಪಾದನೆಯ ಶೇ.70ಕ್ಕಿಂತ ಅಧಿಕ ಪ್ರಮಾಣದ ಪವನ ವಿದ್ಯುತ್ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ಆಗುತ್ತಿದೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಪವನ ವಿದ್ಯುತ್ ಉತ್ಪಾದನೆಗೊಂಡು ರಾಜ್ಯ, ಹೊರ ರಾಜ್ಯದ ಜಿಲ್ಲೆಗಳಿಗೆ ಪೂರೈಕೆ ಆಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 1,24,139 ಮೆಗಾವಾಟ್ ಉತ್ಪಾದನೆ ಸಾಮರ್ಥ್ಯ ಇದ್ದರೂ ಪ್ರತಿನಿತ್ಯ 25,400 ಮೆಗಾವಾಟ್ ಮಾತ್ರ ಉತ್ಪಾದನೆ ಸಾಧ್ಯವಾಗಿದೆ. ಇದರಲ್ಲಿ ಗದಗ- 4,665 ಮೆಗಾವ್ಯಾಟ್, ಕೊಪ್ಪಳ 3,800, ವಿಜಯಪುರ- 3,325, ಬೆಳಗಾವಿ 3,040, ಬಾಗಲಕೋಟೆ ಜಿಲ್ಲೆಯಿಂದ 850, ಬಳ್ಳಾರಿ-1,800, ಕಲಬುರಗಿ-1,090 ಮೆಗಾವಾಟ್ ಉತ್ಪಾದಿಸಲಾಗುತ್ತಿದೆ.
ಸಂಗ್ರಹಣಾ ತಂತ್ರಜ್ಞಾನ ಸಮಸ್ಯೆ: ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಪವನ್ಶಕ್ತಿ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ ಪವನ ವಿದ್ಯುತ್ ಸಂಗ್ರಹಣಾ ತಂತ್ರಜ್ಞಾನ ಜಾರಿಯಾಗಿಲ್ಲ. ಇದರಿಂದ ಸಾವಿರಾರು ಮೆಗಾವಾಟ್ ವಿದ್ಯುತ್ ಬಳಕೆ ಸಾಧ್ಯವಾಗುತ್ತಿಲ್ಲ ಹಾಗೂ 2015ರಿಂದ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ವಿದ್ಯುತ್ ಖರೀದಿ ಒಪ್ಪಂದಗಳು ಆಗಿಲ್ಲ. ಸರ್ಕಾರ 2015ರ ನಂತರ ಒಪ್ಪಂದ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ವಿದ್ಯುತ್ ಉತ್ಪಾದಕರು ಕೈಗಾರಿಕೆ, ಕಿರು ಉದ್ಯಮ, ಸ್ವಂತ ಬಳಕೆ ಸೇರಿದಂತೆ ನಾನಾ ಯೋಜನೆಗಳಿಗೆ ಸ್ವತಂತ್ರವಾಗಿ ವಿದ್ಯುತ್ ಮಾರಾಟ ಮಾಡುತ್ತಿದ್ದಾರೆ. ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿನ 4,000 ಮೆಗಾವಾಟ್ಗೂ ಹೆಚ್ಚಿನ ಶಕ್ತಿಯನ್ನು ಹೊರ ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ.
ಜಿಲ್ಲೆ ಮೊದಲು: ಗದಗ ಜಿಲ್ಲೆಯಲ್ಲಿ ಉತ್ಪಾದನೆ ಹಂಚಿಕೆ 6,500 ಮೆಗಾವಾಟ್. ಜಿಲ್ಲಾವಾರು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಗದಗ ಪ್ರಥಮ ಸ್ಥಾನದಲ್ಲಿದೆ. ಜಿಲೆಯ ಸಾಮರ್ಥ್ಯದ ಶೇ.80ರಷ್ಟು ಪವನ ವಿದ್ಯುತ್ ಉತ್ಪಾದನೆ ಆಗುತ್ತಿರುವುದು ವಿಶೇಷ. ಜಿಲ್ಲೆಯಲ್ಲಿರುವ ಕಪ್ಪತಗುಡ್ಡದಲ್ಲಿ ಏಷಿಯಾದಲ್ಲೇ ಅತೀ ವೇಗವಾಗಿ ಗಾಳಿ ಬೀಸುವ ಕಾರಣ ಉತ್ಪಾದನೆ ಅತ್ಯಧಿಕವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.
ಜಿಲ್ಲೆ - ಸಾಮರ್ಥ್ಯ - ಉತ್ಪಾದನೆ(ಮೆಗಾವಾಟ್)
ಗದಗ- 6,456- 4,665
ಕೊಪ್ಪಳ - 7,971- 3,800
ವಿಜಯಪುರ- 12,946- 3,325
ಬೆಳಗಾವಿ- 14,215- 3,040
ಬಾಗಲಕೋಟೆ 7,102- 850
ಬಳ್ಳಾರಿ- 7,978- 1,800
ಕಲಬುರಗಿ- 2,154- 1,090
ಪುನರ್ಬಳಕೆ ಇಂಧನಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ವಿದ್ಯುತ್ ಸಂಗ್ರಹಣಾ ಸಾಮರ್ಥ್ಯವನ್ನು ರಾಜ್ಯದಲ್ಲಿ ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದೊಮ್ಮೆ ಇಂತಹ ತಂತ್ರಜ್ಞಾನ ಅಭಿವೃದ್ಧಿಯಾದರೆ ಭವಿಷ್ಯದಲ್ಲಿ ವಿದ್ಯುತ್ ಕೊರತೆೆಯಾಗದು. | ಕೆ.ಪಿ. ರುದ್ರಪಯ್ಯ ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಿಲ್