ಗಾಳಿ ಮಳೆಗೆ ಬಾಳೆ ಫಸಲು ನಾಶ

26 HANUR 2
ಭಾನುವಾರ ರಾತ್ರಿ ಸುರಿದ ಜೋರು ಗಾಳಿ ಮಳೆಗೆ ಶಾಂತಮೂರ್ತಿ ಎಂಬುವರ ಜಮೀನಿನಲ್ಲಿ ಗೊನೆ ಬಿಟ್ಟಿದ್ದ ಬಾಳೆ ಫಸಲು ನೆಲಕ್ಕುರುಳಿರುವುದು.
Published on

ಹನೂರು : ಸಮೀಪದ ಆನಾಪುರ ಗ್ರಾಮದ ಜಮೀನೊಂದರಲ್ಲಿ ಭಾನುವಾರ ರಾತ್ರಿ ಸುರಿದ ಜೋರು ಗಾಳಿ ಸಹಿತ ಮಳೆಗೆ ಬಾಳೆ ಫಸಲು ನಾಶವಾಗಿದ್ದು, ನಷ್ಟ ಉಂಟಾಗಿದೆ.

ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಶಾಂತಮೂರ್ತಿ ಎಂಬುವರು ಆನಾಪುರ ಗ್ರಾಮದ ಸರ್ವೇ ನಂ.91/1ರಲ್ಲಿ 3 ಎಕರೆ ಜಮೀನನ್ನು ಹೊಂದಿದ್ದು, ಸಾವಿರಾರು ರೂ. ವ್ಯಯಿಸಿ 2.5 ಎಕರೆಯಲ್ಲಿ ಬಾಳೆ ಫಸಲನ್ನು ಬೆಳೆದಿದ್ದರು. ಗೊನೆಗಳು ಬಿಟ್ಟಿದ್ದವು. ಇದರಲ್ಲಿ ಕೆಲವು ಗೊನೆಗಳನ್ನು ಕಟಾವು ಮಾಡಲಾಗಿತ್ತು. ಇನ್ನು ಕೆಲವನ್ನು ಹಾಗೆಯೇ ಬಿಡಲಾಗಿತ್ತು. ಆದರೆ ಈ ಭಾಗದಲ್ಲಿ ರಾತ್ರಿ ಜೋರು ಗಾಳಿಯೊಂದಿಗೆ ಮಳೆಯಾದ ಪರಿಣಾಮ ಗೊನೆ ಬಿಟ್ಟಿದ್ದ ಬಾಳೆ ಫಸಲು ನೆಲಕ್ಕುರುಳಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹಾಗೆಯೇ ಜೋರು ಗಾಳಿಗೆ ಜಮೀನಿನಲ್ಲಿದ್ದ ತೆಂಗಿನ ಮರವೊಂದು ಬಾಳೆ ಫಸಲಿನ ಮೇಲೆ ಉರುಳಿದೆ. ಇದರಿಂದ ನಷ್ಟ ಉಂಟಾಗಿದೆ.

ಪರಿಹಾರಕ್ಕೆ ಒತ್ತಾಯ: ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ನಷ್ಟ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತ ಕಾಮಗೆರೆ ಶಾಂತಮೂರ್ತಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net