

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಗಾಳಿ ಮಳೆಗೆ 10ಕ್ಕೂ ಅಧಿಕ ಮನೆಗಳಿಗೆ ಹಾನಿಗೊಂಡಿವೆ. ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲೋನಿ ಪರಿಸರದಲ್ಲಿ ಗಾಳಿಮಳೆಗೆ ಆರು ಮನೆಗಳು ಹಾನಿಗೀಡಾಗಿವೆ. ಪುತ್ತಿಗೆ ಗ್ರಾಮದ ಗುಡ್ಡೆಯಂಗಡಿ ಆನಡ್ಕದಲ್ಲಿರುವ ಚೆಲ್ಲಾ ಎಂಬುವವರ ಮನೆ ಮನೆ ಮರಬಿದ್ದು ಹಾನಿಯಾಗಿದೆ. ಪುರಸಭೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮ ಮಾರಿಯಾಡಿಯಲ್ಲಿ ಶೀನ ಪರವ ಅವರ ಮನೆ ಮೇಲೆ ಮರಬಿದ್ದು ನಷ್ಟವಾಗಿದೆ. ಚಂದ್ರಾಪುರದಲ್ಲಿ ನಾರಾಯಣ, ಶಾಂತಿ ರೋಡ್ರಿಗಸ್, ಸರಸ್ವತಿ ಶೆಟ್ಟಿಗಾರ್, ಜುಲಿಯಾನ ಡಿಸೋಜ, ಆಶ್ರಯ ಕಾಲೋನಿಯಲ್ಲಿ ಸತೀಶ್ ಸಾಲ್ಯಾನ್ ಹಾಗೂ ಸನಿಹದ ಮನೆಗೆ ಭಾಗಶಃ ಹಾನಿಯಾಗಿದೆ.
ಅಲಂಗಾರು ಕಟ್ಟೆ ರಿಕ್ಷಾ ಜಂಕ್ಷನ್‌ನಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು ಈ ವೇಳೆ ಯಾವುದೇ ವಾಹನಗಳಿಲ್ಲದೇ ಇದ್ದುದ್ದರಿಂದ ಅನಾಹುತ ಸಂಭವಿಸಿಲ್ಲ. ಅಲಂಗಾರು ಚರ್ಚ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಕಾರಿಗೆ ಹಾನಿಯಾಗಿದ್ದು ಚಾಲಕ ವಿಶುಕುಮಾರ್ ಶೆಟ್ಟಿ ಪಾರಾಗಿದ್ದಾರೆ.
ಕಡಲಕೆರೆ-ಪಳಕಳದಲ್ಲಿ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆ ಬಿದ್ದು, ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಶಿರ್ತಾಡಿ ಗ್ರಾಪಂ ವ್ಯಾಪ್ತಿಯ ಮೂಡುಕೊಣಾಜೆಯ ಸರ್ಕಾರಿ ಪ್ರೌಢಶಾಲೆಯ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದಿದೆ. ಪಡುಕೊಣಾಜೆ ವ್ಯಾಪ್ತಿಯಲ್ಲಿ ರಬ್ಬರ್ ಪ್ಲಾಂಟೇಶನ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ. ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಕಂದಾಯ, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.