ಸಮಗ್ರ ಅಭಿವೃದ್ಧಿಗಾಗಿ ಯದುವೀರ್ ಗೆಲ್ಲಿಸಿ

ಹುಣಸೂರು ನಗರದಲ್ಲಿ ಆಯೋಜಿಸಿದ್ದ ಎನ್‌ಡಿಎ ಮೈತ್ರಿಕೂಟದ ಸಭೆಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆರ್, ಮುಖಂಡರಾದ ಮಂಗಳ ಸೋಮಶೇಖರ್, ನಾಗಣ್ಣಗೌಡ, ಸತೀಶ್‌ಕುಮಾರ್, ಗಣೇಶ್ ಕುಮಾರಸ್ವಾಮಿ, ಕಾಂತರಾಜು ಮತ್ತಿತರರಿದ್ದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಎನ್‌ಡಿಎ ಮೈತ್ರಿಕೂಟದ ಸಭೆಯನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆರ್, ಮುಖಂಡರಾದ ಮಂಗಳ ಸೋಮಶೇಖರ್, ನಾಗಣ್ಣಗೌಡ, ಸತೀಶ್‌ಕುಮಾರ್, ಗಣೇಶ್ ಕುಮಾರಸ್ವಾಮಿ, ಕಾಂತರಾಜು ಮತ್ತಿತರರಿದ್ದರು.
Published on

ಹುಣಸೂರು: ಕೇಂದ್ರ ಪುರಸ್ಕೃತ ಯೋಜನೆಗಳ ಹೆಚ್ಚಿನ ಪ್ರಮಾಣದ ಸದ್ಬಳಕೆ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎನ್‌ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮತ ನೀಡಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಮನವಿ ಮಾಡಿದರು.

ನಗರದ ಆದಿನಾರಾಯಣ ಶೆಟ್ಟಿ ಕನ್ವೆನ್‌ಷನ್ ಹಾಲ್‌ನಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಯದುವೀರ್ ಪರ ಕಸಬಾ ಹೋಬಳಿ ಮತ್ತು ನಗರವ್ಯಾಪ್ತಿಯ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮತಯಾಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಿನಕ್ಕೆ ಸತತ 20 ಗಂಟೆಗಳ ಕಾಲ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದುಡಿಯುತ್ತಿರುವ ಮಹಾನ್ ನೇತಾರ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲಾಗದು. ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗಳಿಸುವ ಮೂಲಕ ದೇಶದಲ್ಲಿ ಮತ್ತೆ ಮೋದಿ ಪ್ರಧಾನಿ ಆಗಲಿದ್ದಾರೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೈಸೂರು ಮಹಾರಾಜರ ಕುಡಿ ಯದುವೀರ್‌ರ ಸರಳ ಸಜ್ಜನಿಕೆಯ ನಡೆ ಅವರ ಕುರಿತಾಗಿ ಮಾತನಾಡುತ್ತಿದ್ದ ಟೀಕಾಕಾರಿಗೆ ಉತ್ತರವಾಗಿದೆ. ಯದುವಂಶದ ರಾಜರುಗಳ ಕೊಡುಗೆ ಅನನ್ಯ ಎಂದು ಹೇಳಿದರು.

ವಸತಿ ಸೌಲಭ್ಯ ಸಿಕ್ಕಿಲ್ಲ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ಬೇಸರ ತರಿಸಿವೆ. ರಸ್ತೆಯ ಗುಂಡಿಯನ್ನು ಮಣ್ಣುಹಾಕಿ ಮುಚ್ಚಲೂ ಕೂಡ ಸರ್ಕಾರ ಅನುದಾನ ನೀಡುತ್ತಿಲ್ಲ. ನಗರದಲ್ಲಿ ಕಳೆದ 15 ವರ್ಷಗಳಿಂದ ಆಶ್ರಯ ಯೋಜನೆಯಡಿ ಬಡವರಿಗೆ ವಸತಿ ಸೌಲಭ್ಯ ಸಿಕ್ಕಿಲ್ಲ. ಇಂತಹ ಶಾಶ್ವತ ಕಾರ್ ಮುಖ್ಯವೇ ಅಥವಾ ಗ್ಯಾರಂಟಿ ಯೋಜನೆ ಮುಖ್ಯವೇ ಎನ್ನುವುದನ್ನು ಮತದಾರರು ಯೋಚಿಸಬೇಕು. ನೂತನ ಟಿಸಿ ಅಳವಡಿಕೆಗೆ ಸರ್ಕಾರ 3 ಲಕ್ಷ ರೂ.ಗಳನ್ನು ಭರಿಸಲು ರೈತರಿಗೆ ಸೂಚಿಸಿದೆ. ಇದು ನ್ಯಾಯವೇ? ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರನ್ನು ಆಯ್ಕೆ ಮಾಡುವ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳೋಣ. ಇಬ್ಬರೂ ಒಟ್ಟಾಗಿ ದುಡಿದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಜನತೆ ಆಶೀರ್ವದಿಸಬೇಕು ಎಂದು ಜಿ.ಡಿ.ಹರೀಶ್ ಗೌಡ ಕೋರಿದರು.

ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಹಲವು ವರ್ಷಗಳು ಆಳ್ವಿಕೆ ನಡೆಸಿ ಕಾಂಗ್ರೆಸ್ ಅವಧಿಯಲ್ಲಾದ ಅಭಿವೃದಿ ್ಧಕಾರ್ಯಗಳ ಹತ್ತು ಪಟ್ಟು ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದೆ. 40 ವಂದೇಭಾರತ್ ರೈಲು, ಸಾವಿರಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು, 700ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಹೀಗೆ ಮೋದೀಜಿ ಅವರ ಅಭಿವೃದ್ಧಿ ಕಾರ್ಯಗಳು ಮನೆಮಾತಾಗಿವೆ. 10 ವರ್ಷದಿಂದ ಒಂದು ದಿನವೂ ವಿಶ್ರಮಿಸದೆ ದುಡಿಯುತ್ತಿರುವ ನೇತಾರ ಮೋದೀಜಿ. ಅವರ ಆಸೆಯಂತೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ವೈಯಕ್ತಿಕವಾಗಿ ನಾನು ಹುಣಸೂರಿನ ಮೊಮ್ಮಗನಾಗಿದ್ದೇನೆ. ಹಾಗಾಗಿ ನಾನು ನಿಮ್ಮೆಲ್ಲರ ಮನೆ ಮಗನಾಗಿ ತಾಲೂಕಿನ ಅಭಿವೃದ್ಧಿಗೆ ದುಡಿಯುತ್ತೇನೆ. ಸ್ಥಳೀಯವಾಗಿ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವತ್ತ ಎಲ್ಲರ ಸಹಕಾರದೊಂದಿಗೆ ಮುಂದುವೆರೆಯುತ್ತೇನೆ. ದೇಶದ ಭವಿಷ್ಯಕ್ಕಾಗಿ ಮೋದಿ ಕೈ ಬಲಪಡಿಸುವ ಸಲುವಾಗಿ ನನಗೆ ಮತ ನೀಡಬೇಕು ಎಂದು ಕೋರಿದರು.

ಮುಖಂಡರಾದ ನಿಂಗರಾಜ ಮಲ್ಲಾಡಿ, ಶಿವಶೇಖರ್ ಮಾತನಾಡಿದರು. ಮಾಜಿ ಸಚಿವ ಎಸ್.ರಾಮದಾಸ್, ಬಿಜೆಪಿ ನಗರಮಂಡಲ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ನಾರಾಯಣ, ತಾಲೂಕು ಅಧ್ಯಕ್ಷ ಕಾಂತರಾಜು, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ದೇವರಾಜ ಒಡೆಯರ್, ದೇವರಳ್ಳಿ ಸೋಮಶೇಖರ್, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ವಿವೇಕ್, ಸತೀಶ್‌ಕುಮಾರ್ ಇತರರು ಹಾಜರಿದ್ದರು.

ಕ್ರಮ ಸಂಖ್ಯೆ ಒಂದನ್ನು ಒತ್ತಿ: ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಈ ಬಾರಿ ಚುನಾವಣೆಗೆ 18 ಜನರು ಸ್ಪರ್ಧಿಸಿದ್ದು, ನಿಮ್ಮ ಮತಗಟ್ಟೆಯಲ್ಲಿ ಎರಡು ಎಲೆಕ್ಟ್ರಾನಿಕ್ ಮತಯಂತ್ರಗಳಿರುತ್ತವೆ. ನೀವು ಮತಯಂತ್ರದಲ್ಲಿನ ಕ್ರಮಸಂಖ್ಯೆ 1ರ ಗುರುತಿನ ಕಮಲದ ಹೂಗೆ ಮತ ಚಲಾಯಿಸಬೇಕು ಬೇರೆ ಕಡೆ ನೋಡಬೇಡಿ. ಕಮಲಕ್ಕೆ ಮತ ನೀಡುವ ಮೂಲಕ ಮಹಾರಾಜರನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net