ಮರು ಮತ ಎಣಿಕೆಯಲ್ಲಿ ಮೂರು ಮತಗಳ ಅಂತರದಿಂದ ಗೆಲುವು

24bhr 4
Published on

ಬಾಳೆಹೊನ್ನೂರು: ಆಡುವಳ್ಳಿ ಗ್ರಾಮ ಪಂಚಾಯಿತಿಯ ಕೊಳಲೆ ಕ್ಷೇತ್ರಕ್ಕೆ 2021ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ 3 ಮತಗಳ ಅಂತರದಿಂದ ಸೋತಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಅವರಿಗೆ ಮರು ಮತ ಎಣಿಕೆಯಲ್ಲಿ ನ್ಯಾಯಾಲಯದ ಮೂಲಕ ಜಯ ಲಭಿಸಿದೆ.

ಆಡುವಳ್ಳಿ ಗ್ರಾಪಂನ ಕೊಳಲೆ ವಾರ್ಡ್‌ನ ಸಾಮಾನ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಎಂ.ವಿ.ಶ್ರೀನಿವಾಸಗೌಡ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚನ್ನಪ್ಪಗೌಡ ಸ್ಪರ್ಧಿಸಿದ್ದರು. ಮತ ಎಣಿಕೆಯಲ್ಲಿ ಎಂ.ವಿ.ಶ್ರೀನಿವಾಸಗೌಡಗೆ 379, ಚನ್ನಪ್ಪಗೌಡಗೆ 383 ಮತಗಳು ಲಭಿಸಿದ್ದವು. ಚುನಾವಣಾಧಿಕಾರಿಗಳು 3 ಮತಗಳ ಅಂತರದಲ್ಲಿ ಅಭ್ಯರ್ಥಿ ಚನ್ನಪ್ಪಗೌಡ ಜಯ ಸಾಧಿಸಿದ್ದಾರೆ ಎಂದು ಘೋಷಿಸಿದ್ದರು.

ಆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತಎಣಿಕೆ ನಡೆಸಿ ತೀರ್ಪು ನೀಡಬೇಕು ಎಂದು ಎನ್.ಆರ್.ಪುರ ನ್ಯಾಯಾಲಯದ ಮೊರೆ ಹೋಗಿದ್ದರು. ಮೂರು ವರ್ಷಗಳಿಂದ ಸತತ ವಾದ, ವಿವಾದ, ವಿಚಾರಣೆ ನಡೆದು ಚಲಾವಣೆಗೊಂಡ ಮತಗಳನ್ನು ಮರು ಎಣಿಕೆ ಮಾಡಿದಾಗ, ತಿರಸ್ಕೃತಗೊಂಡ ಮತಗಳ ಪೈಕಿ 3 ಮತಗಳನ್ನು ಸ್ಕೇಲ್ ಮೂಲಕ ಅಳತೆ ಮಾಡಿದಾಗ ಅಭ್ಯರ್ಥಿ ಎಂ.ವಿ.ಶ್ರೀನಿವಾಸಗೌಡ ಅವರ ಚಿಹ್ನೆ ಕಡೆಗೆ ಹೆಚ್ಚುವರಿಯಾಗಿ ಮತ ಚಲಾವಣೆಗೊಂಡಿರುವುದು ಕಂಡುಬಂದಿದೆ.

ಈ ಹಿಂದೆ ತಿರಸ್ಕೃತಗೊಂಡ ಈ ಮತಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚನ್ನಪ್ಪಗೌಡ ಅವರಿಗೆ ನೀಡಲಾಗಿತ್ತು. ಇದೀಗ ಮರುಮತ ಎಣಿಕೆಯಲ್ಲಿ ಎಂ.ವಿ.ಶ್ರೀನಿವಾಸಗೌಡಗೆ 383, ಚನ್ನಪ್ಪಗೌಡ ಅವರಿಗೆ 379 ಮತಗಳು ಲಭಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿದ್ದು,3 ಮತಗಳ ಅಂತರದಲ್ಲಿ ಎಂ.ವಿ.ಶ್ರೀನಿವಾಸಗೌಡ ಜಯಗಳಿಸಿದ್ದು, ಆಡುವಳ್ಳಿ ಗ್ರಾಪಂನ ಸದಸ್ಯರಾಗಲು ಎಂ.ವಿ.ಶ್ರೀನಿವಾಸಗೌಡ ಅರ್ಹತೆ ಪಡೆದಿದ್ದಾರೆ ಎಂದು ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಧನಂಜಯ ಮೇಧೂರ್ ಶುಕ್ರವಾರ ನ್ಯಾಯಾಲಯದ ಆದೇಶದಂತೆ ಬಿಜೆಪಿ ಬೆಂಬಲಿತ ಶ್ರೀನಿವಾಸಗೌಡಗೆ ಅಧಿಕೃತ ಚುನಾವಣಾ ಪ್ರಮಾಣ ಪತ್ರ ನೀಡಿ, ಕೊಳಲೆ ಕ್ಷೇತ್ರದಿಂದ ಕ್ರಮಬದ್ಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ.ಪ್ರದೀಪ್, ಉಪಾಧ್ಯಕ್ಷೆ ರಾಧಾ, ಸದಸ್ಯರಾದ ಗಣೇಶ್, ಪ್ರತಿಮಾ, ಕವಿತ, ಮುಖಂಡರಾದ ಸುಭಾಶ್ ಕಿಚ್ಚಬ್ಬಿ, ರಮೇಶ್, ವೇಣು, ಸತೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net